ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಲ್ಯಾಣದಿಂದ ಕದಳಿ
೨೦೭


ಮಾತುಗಂಟುತನದಿಂದ ಎಷ್ಟು ಮಾತನಾಡಿದಡೇನು ?
ಕಾಮಿನಿಯರ ಕಾಲದೆಸೆಯಲ್ಲಿ ಸಿಕ್ಕಿ,
ಕ್ರೋಧದ ದಳ್ಳುರಿಯಲ್ಲಿ ಬೆಂದು,
ಆಶೆಯೆಂಬ ಪಾಶ ಕೊರಳಲ್ಲಿ ಸುತ್ತಿ, ಅದೇಕೋ
ಅದೇತರ ಮಾತೆಂದನಂಬಿಗರ ಚೌಡಯ್ಯ.

ಅಣ್ಣನವರನ್ನು ನಿಂದಿಸುವ ಅವನ ಮಾತುಗಳನ್ನು ಕೇಳಿ ನನಗೇನೋ ಸ್ಫೂರ್ತಿ ಬಂದಂತಾಗಿತ್ತು. ಮತ್ತೊಂದು ವಚನವನ್ನು ಹೇಳಿದೆ :

ಅರ್ಚನೆಯ ಮಾಡುವಲ್ಲಿ ವೇಷವರಿತಿರಬೇಕು,
ಪೂಜೆಯ ಮಾಡುವಲ್ಲಿ ಪುಣ್ಯಮೂರ್ತಿಯಾಗಿರಬೇಕು,
ಕೊಳುಕೊಡೆಯಲ್ಲಿ ಭೂತಹಿತವಾಗಿರಬೇಕು,
ಇಂತೀ ಸಡಗರಿಸಿಕೊಂಡಿಪ್ಪಾತನಡಿಗೆರಗುವೆನೆಂದಾತ ಅಂಬಿಗರ ಚೌಡಯ್ಯ

ಹೇಳುತ್ತಾ ಹೇಳುತ್ತಾ ಚೌಡಯ್ಯ, ಆ ಸನ್ನಿವೇಶದಲ್ಲಿಯೇ ಇದ್ದವನಂತೆ ಆವೇಶಗೊಂಡಿದ್ದ.

``ಹೌದು ಚೌಡಯ್ಯ, ತುಂಬಾ ಸುಂದರವಾದ ಮಾತನ್ನೇ ಹೇಳಿದ್ದೀಯ - ಪ್ರಭುದೇವ ಮೆಚ್ಚಿ ನುಡಿದ.

ಸ್ವಲ್ಪ ಆವೇಶ ಇಳಿದು ಚೌಡಯ್ಯ :

``ಇದರಲ್ಲಿ ನನ್ನದೇನೂ ಇಲ್ಲ, ಸ್ವಾಮಿ. ಅಣ್ಣನ ಮಾತುಗಳನ್ನೇ ನನ್ನ ರೀತಿಯಲ್ಲಿ ನುಡಿದಿದ್ದೇನೆ. ಅದಿರಲಿ, ನಾನು ನುಡಿದ ಈ ಮಾತುಗಳನ್ನು ಕೇಳಿದ ನಂತರ ಆತ ಸ್ವಲ್ಪ ಕಾಲ ಸುಮ್ಮನಿದ್ದು ಕೋಪವನ್ನು ಅಡಗಿಸಿಕೊಂಡು ಹೀಗೆ ಹೇಳಿದ : `ಅದೆಲ್ಲಾ ಸರಿ, ಚೌಡಯ್ಯ. ಸ್ವಲ್ಪ ನಿಧಾನವಾಗಿ ಆಲೋಚನೆ ಮಾಡು: ನಿಮ್ಮ ಬಸವಣ್ಣ ಹೇಳುವಂತೆ ಧರ್ಮದಲ್ಲಿ ಎಲ್ಲರಿಗೂ ಸಮಾನ ಅಧಿಕಾರ ಎಂಬ ಮಾತನ್ನು ಒಪ್ಪುವುದು ಸಾಧ್ಯವೇ? ಈ ಚತುವರ್ಣಗಳೂ, ಪಂಚಮವರ್ಣವೂ ಬೇರೆ ಬೇರೆ ಇರುವಾಗ, ಇವರೆಲ್ಲರ ಸಂಸ್ಕಾರವೂ ಬೇರೆ ಬೇರೆಯಾಗಿರುವಾಗ, ಎಲ್ಲರೂ ಒಂದೇ ಎಂದರೆ ಅದು ಒಪ್ಪುವ ಮಾತೇ ? ಅವರವರ ಸಂಸ್ಕಾರಕ್ಕನುಗುಣವಾಗಿ, ಕರ್ಮಕ್ಕನುಗುಣವಾಗಿ ಆಯಾ ಜಾತಿಯಲ್ಲಿ ಅವರು ಹುಟ್ಟಿರುತ್ತಾರೆ. ಅದನ್ನು ಮೀರಿ ಉತ್ತಮರೊಡನೆ ಪಂಚಮರೂ ಧರ್ಮಕ್ಕೆ ಸಮಾನ ಅಧಿಕಾರಿಗಳೆಂದರೆ ಧರ್ಮ ಉಳಿದೀತೇ ? ಎಲ್ಲರೂ ಸಮಾನರಾದರೆ ಈ ಬೇರೆ ಬೇರೆ ಜಾತಿಗಳು ಏಕಾದವು ? ಬೇರೆ ಬೇರೆ ಸಂಸ್ಕಾರಗಳು ಏಕಾದವು? ದೇವರೇ ಮಾಡಿರುವ ಈ ಜಾತಿಗಳನ್ನೂ ಮೀರಿ ನಡೆಯುವುದು ಯೋಗ್ಯವೇ?