ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೦೮
ಕದಳಿಯ ಕರ್ಪೂರ


ನೀನೇ ಆಲೋಚನೆ ಮಾಡು' - ಇದು ಆತ ಹೇಳಿದ ಮಾತು. ಅಲ್ಲೇನೋ ಒಂದು ರೀತಿಯ ಒರಟಾಗಿ ಉತ್ತರವನ್ನು ಕೊಟ್ಟೆ, ಆದರೆ ಈ ಎರಡು ಮೂರು ದಿನಗಳಿಂದಲೂ ಇದು ನನ್ನ ಮನಸ್ಸಿನಲ್ಲಿ ಸಂದೇಹವನ್ನು ಎಬ್ಬಿಸಿದೆ. ಇದನ್ನು ತಮ್ಮ ಮುಂದೆ ಇಟ್ಟಿದ್ದೇನೆ. ವಿಷಯ ಪರಾಂಬರಿಕೆಯಾಗಬೇಕು.

ಮಾತನ್ನು ಮುಗಿಸಿದ ಚೌಡಯ್ಯ. ಅನುಭವಮಂಟಪ ಸ್ತಬ್ಧವಾಗಿತ್ತು. ಶರಣರು ಗಹನವಾದ ಆಲೋಚನೆಯಲ್ಲಿ ತೊಡಗಿದಂತೆ ತೋರುತ್ತಿತ್ತು. ಬಸವಣ್ಣ ಅಂದು ಹೆಜ್ಜೆ ಹೆಜ್ಜೆಗೂ ಎದುರಿಸಬೇಕಾಗಿದ್ದ ಬಹುಮುಖ್ಯವಾದ ಸಮಸ್ಯೆಯನ್ನೇ ಚೌಡಯ್ಯ ಮುಂದೆ ಇಟ್ಟಿದ್ದ.

ಅಲ್ಲಮಪ್ರಭು ಚನ್ನಬಸವೇಶ್ವರನತ್ತ ನೋಡಿದ. ಬಸವಣ್ಣ ಇದಕ್ಕೆ ಉತ್ತರವನ್ನೀಯಲು ಉದ್ಯಕ್ತನಾಗಿರುವಷ್ಟರಲ್ಲಿ ಚನ್ನಬಸವಣ್ಣ ಮೇಲೆದ್ದು ಹೇಳಿದ:

``ಚೌಡಯ್ಯನವರು ಎತ್ತಿದ ಸಮಸ್ಯೆಯನ್ನು ಕುರಿತು ಅಣ್ಣನವರ ದೃಷ್ಟಿ ಏನೆಂಬುದನ್ನು ಅವರೇ ಹೇಳುವುದಕ್ಕೆ ಮೊದಲು, ನನಗೆ ಅಪ್ಪಣೆಯಾಗಬೇಕು. ಅನಂತರ ಅಣ್ಣನವರು ಅದಕ್ಕೆ ಮುಕ್ತಾಯದ ಅನುಭವ ಮುದ್ರೆಯನ್ನು ಒತ್ತಲಿ ಎಂದು ಪ್ರಭುವಿನತ್ತ ನೋಡಿದ ಚನ್ನಬಸವ.

``ಹೇಳು ಚನ್ನಬಸವಣ್ಣ, ಗುರುವಿಗೆ ಗುರುವಾಗುವ ಜ್ಞಾನಯೋಗಿ ನೀನು ಹೇಳು. ಮುಗುಳುನಗುತ್ತಾ ಒಪ್ಪಿಗೆಯನ್ನು ಸೂಚಿಸಿದ ಪ್ರಭುದೇವ.

ಚನ್ನಬಸವಣ್ಣನ ಮಾತು ಮುಂದುವರಿಯಿತು.

``ಹುಟ್ಟಿನಿಂದಲೇ ಜಾತಿಯನ್ನು ನಿರ್ಧರಿಸಬೇಕೆಂಬುದನ್ನು ಅಣ್ಣನವರು ಪ್ರತಿಭಟಿಸುತ್ತಾರೆ. ಈ ಚತುವರ್ಣಗಳೂ ಪಂಚಮವರ್ಣವೂ ಬೇರೆಬೇರೆ ಎಂಬುದನ್ನಾಗಲೀ, ಅವರವರ ಕರ್ಮಕ್ಕನುಗುಣವಾಗಿ, ಸಂಸ್ಕಾರಕ್ಕನುಗುಣವಾಗಿ ಆಯಾ ಜಾತಿಯಲ್ಲಿ ಹುಟ್ಟುತ್ತಾರೆಂಬುದನ್ನಾಗಲಿ, ಯಾವ ವಿಚಾರವಂತನೂ ಒಪ್ಪಲಾರ. ಉತ್ತಮ ಸಂಸ್ಕಾರಗಳು, ಉತ್ತಮ ಆಚರಣೆಗಳು, ಯಾವ ಒಂದು ಜಾತಿಯ ಗುತ್ತಿಗೆಯಲ್ಲ. ಉತ್ತಮ ವರ್ಣದವರೆನಿಸಿಕೊಂಡ ಅನೇಕರಲ್ಲಿ ಇರುವ ಕುಸಂಸ್ಕಾರಗಳನ್ನೂ, ಕುಟಿಲ ಕುಹಕಗಳನ್ನೂ ನೋಡಿದಾಗ ಮತ್ತು ಕೀಳೆನಿಸಿಕೊಂಡಿರುವವರಲ್ಲಿ ಕಾಣುವ ಸುಸಂಸ್ಕಾರಗಳನ್ನೂ ಉದಾತ್ತ ಗುಣಗಳನ್ನೂ ಕಂಡಾಗ, ಈ ಜಾತಿಭೇದಗಳು ದೇವರು ಮಾಡಿದುವುಗಳಲ್ಲ, ಕೇವಲ ಮನುಷ್ಯ ಕಲ್ಪಿತವಾದ ಕೃತಕ ವಿಭಜನೆಗಳೆಂಬುದು ಸ್ಪಷ್ಟವಾಗುತ್ತದೆ. ಇದು ಒಂದು ಕಾಲದಲ್ಲಿ ಸಮಾಜದ ಸುವ್ಯವಸ್ಥೆಗಾಗಿ ಏರ್ಪಟ್ಟ ಕಾರ್ಯ ವಿಭಜಣೆ :