ಪುಟ:Kadaliya Karpoora.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦

ಕದಳಿಯ ಕರ್ಪೂರ

ಮಹಾಮಹಿಮರ ಅನಿರೀಕ್ಷಿತ ದರ್ಶನದಿಂದ ಏನನ್ನೂ ಮಾತನಾಡಲಾರದವನಾಗಿ ಮತ್ತೊಮ್ಮೆ ಅವರಿಗೆ ನಮಸ್ಕರಿಸಿದ. ಮತ್ತೆ ಗುರುಗಳೇ ಹೇಳಿದರು:

“ನಿನಗೆ ಹೆಣ್ಣುಮಗುವೇ ಆಗುತ್ತದೆಂದು ಅವರು ಮುನ್ಸೂಚನೆಯನ್ನು ನುಡಿಯುತ್ತಿದ್ದಾರೆ. ಈಗ ತಾನೇ ಆ ವಿಷಯವನ್ನು ಮಾತನಾಡುತ್ತಿದ್ದೆವು. ಆಶ್ಚರ್ಯದಿಂದ ದಿಗ್ಭ್ರಮೆಗೊಂಡು ಮೂಕನಂತಾದರೂ ಹೇಳಿದ ಓಂಕಾರ:

“ಈ ಮಹಾತ್ಮರ ಮಂಗಳಕರವಾದ ಮುನ್ಸೂಚನೆ ಆಗಲೇ ಸತ್ಯವಾಗಿ ಪರಿಣಮಿಸಿದೆ. ಅದನ್ನು ಹೇಳುವುದಕ್ಕಾಗಿಯೇ ತಮ್ಮ ಬಳಿ ಬಂದೆ.”

“ಏನು! ಲಿಂಗಮ್ಮ ಹೆಣ್ಣು ಮಗುವನ್ನು ಹೆತ್ತಳೆ?” ಗುರುಗಳು ಕೇಳಿದರು.

“ಹೌದು ಸ್ವಾಮಿ, ಹೆಣ್ಣು ಶಿಶು ಜನಿಸಿತು....” ಗುರುಗಳು ಮರುಳುಸಿದ್ಧರ ಕಡೆ ಅರ್ಥಗರ್ಭಿತವಾಗಿ ನೋಡಿದರು. ಮರುಳುಸಿದ್ಧರ ಮುಖದ ಮೇಲೆ, ತಮ್ಮ ನಿರೀಕ್ಷೆಯು ಕೈಗೂಡಿದ ವಿಜಯದ ಮಂದಹಾಸ ಮಿನುಗುತ್ತಿತ್ತು.

“....ಅದಕ್ಕಾಗಿ ತಮ್ಮ ಪಾದೋದಕವನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಬಂದೆ” ಮಾತನ್ನು ಪೂರೈಸಿದ ಓಂಕಾರ,

“ನೀನು ನಿಜವಾಗಿಯೂ ಧನ್ಯ, ಓಂಕಾರ. ಪಾದೋದಕವೇಕೆ? ಮರುಳು ಸಿದ್ಧೇಶ್ವರರೇ ನಿನ್ನ ಮನೆಗೆ ಪಾದವಿಡುವರು. ನಿನ್ನ ಮಗಳಿಗೆ ಲಿಂಗದೀಕ್ಷೆಯನ್ನೀಯುವರು” ಎನ್ನುತ್ತಾ ಮರುಳುಸಿದ್ದೇಶ್ವರರ ಕಡೆಗೆ ನೋಡಿದರು ಗುರುಲಿಂಗರು.

“ಹೌದು, ಆ ಕಾರಣಿಕ ಶಿಶುವಿಗೆ ದೀಕ್ಷೆಯನ್ನೀಯುವ ಅವಕಾಶ ನನಗೆ ಬಂದದ್ದು ನನ್ನ ಭಾಗ್ಯ.”

ಮರುಳುಸಿದ್ಧರಿಂದ ಇಂತಹ ಮಾತುಗಳನ್ನು ಕೇಳಿ ಓಂಕಾರ ತನ್ನ ಕಿವಿಯನ್ನು ತಾನು ನಂಬಲಾರದೇ ಹೋದ. ಅಷ್ಟರಲ್ಲಿ ಮತ್ತೆ ಮರುಳುಸಿದ್ಧರೇ ಕೇಳಿದರು:

“ಇಂದು ಮಧ್ಯಾಹ್ನವೇ ಕಾರ್ಯ ನೆರವೇರಬಹುದಷ್ಟೇ?”

“ಆಗಬಹುದು ಸ್ವಾಮಿ. ನಾನೇ ಬಂದು ತಮ್ಮನ್ನು ಕರೆದೊಯ್ಯುತ್ತೇನೆ” ಎಂದು ಗುರುಲಿಂಗರತ್ತ ನೋಡುತ್ತಾ “ಗುರುಗಳೇ, ತಾವು....” ಎಂದ.

“ಹೌದು, ನಾನೂ ಇವರ ಜೊತೆ ಬರುತ್ತೇನೆ” ಗುರುಗಳು ಹೇಳಿದರು.

“ಇಂದು ನನ್ನ ಭಾಗ್ಯಕ್ಕೆ ಎಣೆಯೇ ಇಲ್ಲ’ ಸಂತೋಷದಿಂದ ಉದ್ಗರಿಸಿದ ಓಂಕಾರ.