ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೧೦
ಕದಳಿಯ ಕರ್ಪೂರ


``ಚನ್ನಬಸವಣ್ಣ ಮತ್ತು ಸಿದ್ಧರಾಮಯ್ಯನವರು ಆಗಲೇ ಹೇಳಿದ್ದಾರೆ. ಆದರೂ ವರ್ಣಗಳು ಒಂದು ಕಾಲದಲ್ಲಿ ಸಮಾಜದ ಸುವ್ಯವಸ್ಥೆಗಾಗಿ ಏರ್ಪಟ್ಟ ಕಾರ್ಯವಿಭಜನೆ ಎಂಬ ಮಾತು ನಿಜ. ಆದರೆ ಯಾವುದು ಸಮಾಜದ ಸುವ್ಯವಸ್ಥೆಗಾಗಿ ಏರ್ಪಟ್ಟಿತೋ, ಅದೇ ಸಮಾಜದ ಸಮಸ್ಯೆಯಾಗಿ ಪರಿಣಮಿಸಿತು. ಶ್ರಮದ ವಿಭಜನೆ ಹೋಗಿ ಶ್ರಮಗಾರರ ವಿಭಜನೆಯಾಯಿತು. ಅದರಲ್ಲಿ ಮೇಲು - ಕೀಳೆಂಬ ಭಾವನೆ ಬಲಿಯಿತು. ಸಮಾಜ ಹೋಳುಹೋಳಾಯಿತು. ಹಲವರು ದುಡಿಯುವವರು, ಇನ್ನು ಕೆಲವರು ಆ ದುಡಿಮೆಯ ಫಲವನ್ನು ಕುಳಿತು ತಿನ್ನುವವರು - ಎಂಬ ತಾರತಮ್ಯ ಇರುವವರೆಗೆ ಸಮಾಜದಲ್ಲಿ ಅಸಮತೆ ಇದ್ದೇ ಇರುತ್ತದೆ. ಎಲ್ಲರೂ ದುಡಿಯಬೇಕು ಆಗ ಎಲ್ಲರಿಗೂ ಸಮಾನವಾಗಿ ಬೆಳೆಯಲು ಅವಕಾಶ ಸಿಕ್ಕುತ್ತದೆ.

``ಸ್ಪಷ್ಟತೆಗಾಗಿ ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ ಈ ಮಹಾಮನೆಯಲ್ಲಿ ನಿತ್ಯದಾಸೋಹದ ಏರ್ಪಾಡಿಗಾಗಿ ಅನೇಕ ಶರಣರು, ಒಬ್ಬೊಬ್ಬರು ಒಂದೊಂದು ಕೆಲಸವನ್ನು ಹಂಚಿಕೊಂಡು ದುಡಿಯುತ್ತಿದ್ದಾರೆ. ದುಡಿಯುವಾಗ ಎಲ್ಲರೂ ದುಡಿಯುತ್ತಾರೆ. ಅನಂತರ ಎಲ್ಲರಿಗೂ ಬಿಡುವು ಸಿಕ್ಕುತ್ತದೆ. ಎಲ್ಲರೂ ಇಲ್ಲಿ ಬಂದು ಧರ್ಮಜಿಜ್ಞಾಸೆಯಲ್ಲಿ ತೊಡಗಿದ್ದಾರೆ. ಅದಕ್ಕೆ ಬದಲಾಗಿ ಉದಾಹರಣೆಗೆ, ಅಪ್ಪಣ್ಣ, ಚಂದಯ್ಯ ಈ ಮೂರುನಾಲ್ಕು ಜನಗಳಷ್ಟೇ ಕೆಲಸದಲ್ಲಿ ತೊಡಗಿ, ಅದರ ಫಲವನ್ನು ನಾವೆಲ್ಲಾ ಕುಳಿತು ತಿನ್ನುವಂತಾದರೆ, ದಿನವೆಲ್ಲ ಅವರು ದುಡಿಯುವುದೇ ಆಗುತ್ತದೆ. ಅಧ್ಯಯನ, ಪೂಜೆ ಮೊದಲಾದ ವಿಷಯಗಳಿಗೆ ಮನಸ್ಸು ಕೊಡುವುದಕ್ಕೆ ಸಮಯವೇ ಅವರಿಗೆ ಇಲ್ಲವಾಗುತ್ತದೆ. ಆದರೆ ಕೆಲಸವೇ ಇಲ್ಲದ ನಮಗೆ ಸಮಯವನ್ನು ಕಳೆಯುವುದೇ ಕಷ್ಟವಾಗುತ್ತದೆ.ಎರಡೂ ಪಾಯಕಾರಿಯಾದವುಗಳೇ. ಅವಶ್ಯಕತೆಗಿಂತ ಹೆಚ್ಚಿನ ವಿಶ್ರಾಂತಿ ಆಲಸ್ಯಕ್ಕೆ ಕಾರಣವಾಗುತ್ತದೆ ; ವಿಶ್ರಾಂತಿ ಇಲ್ಲದ ದುಡಿಮೆ, ದೇಹವನ್ನೂ ಮನಸ್ಸನ್ನೂ ಕುಂಠಿತಗೊಳಿಸುತ್ತದೆ. ಆದುದರಿಂದ ಯಾವಾಗಲೂ ದುಡಿಯುತ್ತಿರುವುದೇ ಕೆಲವರ ಹಣೆಯ ಬರಹವಾಗಿ ವಿಶ್ರಾಂತಿ ಕೇವಲ ಕೆಲವರ ಸ್ವತ್ತಾಗಬಾರದು. ಎಲ್ಲರೂ ಈ ಧರ್ಮವನ್ನು ಅರಿತು ಆಚರಿಸಬೇಕು.

``ಸಹನಾವವತು, ಸಹನೌ ಭುನಕ್ತು, ಸಹವೀರ್ಯಂ ಕರವಾವಹೈ - ಎಂದು ಉಪನಿಷತ್ತು ಹೇಳಿದ್ದು ಈ ಅರ್ಥದಲ್ಲಿ. `ನೀವೆಲ್ಲಾ ದುಡಿಯಿರಿ, ನಾವು ಇಲ್ಲಿ ಕುಳಿತು ಧರ್ಮವನ್ನು ಬೋಧಿಸುತ್ತೇವೆ. ನಿಮ್ಮ ಪರವಾಗಿ ನಾವು ಪೂಜೆಯನ್ನು ಮಾಡುತ್ತೇವೆ' ಎಂದು ಹೇಳುವ ಉತ್ತಮ ವರ್ಣದ ಕಲ್ಪನೆ ಇನ್ನು ನಡೆಯಲಾರದು