ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಲ್ಯಾಣದಿಂದ ಕದಳಿ
೨೧೧


ಅವರವರ ಉದ್ಧಾರವನು ಅವರವರೇ ಕಂಡುಕೊಳ್ಳಬೇಕು. ನನ್ನ ಪರವಾಗಿ ಇನ್ನೊಬ್ಬ ಪೂಜೆ ಮಾಡಿ ನನ್ನನ್ನು ಉದ್ಧರಿಸುತ್ತಾನೆನ್ನುವುದು ಹಾಸ್ಯಾಸ್ಪದ. `ತಾನುಂಬ ಊಟವನ್ನು ತನ್ನಾಶ್ರಯದ ರತಿಸುಖವನ್ನು, ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೇ ?' ಎಂದು ನಾನು ಒಂದು ವಚನದಲ್ಲಿ ಹೇಳಿದ್ದು ಈ ಅರ್ಥದಲ್ಲಿಯೇ. `ದುಡಿಮೆ' `ಅಧ್ಯಯನ' `ಅರ್ಚನ' ಈ ಎಲ್ಲವೂ ಎಲ್ಲ ವ್ಯಕ್ತಿಗಳ ಜೀವನದಲ್ಲಿ ಅಳವಡಬೇಕು. ಅದೇ ಕಾಯಕದ ತತ್ವ.

``ಒಬ್ಬ ವ್ಯಕ್ತಿ ಬ್ರಹ್ಮಜ್ಞಾನದ ಅರಿವಿನಲ್ಲಿ ತೊಡಗಿದಾಗ ಬ್ರಾಹ್ಮಣನಾಗುತ್ತಾನೆ. ತನ್ನ ಆತ್ಮರಕ್ಷಣೆಯ ಸಾಹಸದಲ್ಲಿ ತೊಡಗಿದಾಗ ಕ್ಷತ್ರಿಯನಾಗುತ್ತಾನೆ. ದಾನಧರ್ಮದಿಂದ ಕೂಡಿ ಬದುಕುವ ಮಾರ್ಗದ ಪ್ರತಿಫಲದ ಸಂಪಾದನೆಯಲ್ಲಿ ತೊಡಗಿದಾಗ ವೈಶ್ಯನಾಗುತ್ತಾನೆ. ಸಮಾಜದ ಹಿತಕ್ಕಾಗಿ ಇತರರ ಸೇವೆಯಲ್ಲಿ ನಿರತನಾದಾಗ ಶೂದ್ರನಾಗುತ್ತಾನೆ. ಹೀಗೆ ಇವು ವ್ಯಕ್ತಿಯ ಸ್ವಯಂಪೂರ್ಣತೆಯ ಸಾಧನೆಯಲ್ಲಿ ಕೈಗೊಂಡ ವಿವಿಧ ಮುಖಗಳಾಗಬೇಕೇ ಹೊರತು, ಜಾತಿಗಳಾಗಿ ಪರಿಣಮಿಸಬಾರದು.

``ಇಲ್ಲಿ ನಾವೆಲ್ಲಾ ಧರ್ಮಜಿಜ್ಞಾಸೆಯಲ್ಲಿ ತೊಡಗಿದ್ದೇವೆ. ಬ್ರಹ್ಮನ ಅನುಭವದಲ್ಲಿರುವ ನಾವೆಲ್ಲರೂ ಈಗ ಬ್ರಾಹ್ಮಣರು. `ಬ್ರಾಹ್ಮಣ' ಎನ್ನುವುದೊಂದು ಮನೋಧರ್ಮವೇ ಹೊರತು ಅದೊಂದು ಜಾತಿಯಲ್ಲಿ.

ಗಂಭೀರವಾದ ಘಂಟಾನಾದದಂತೆ ಚಿಮ್ಮಿ ಬರುತ್ತಿದ್ದ ಬಸವಣ್ಣನವರ ಮಾತುಗಳು, ಶರಣರ ಮನಸ್ಸಿನಲ್ಲಿ ಅಡಗಿ ಲೀನವಾಗುತ್ತಿದ್ದುವು. ಇದನ್ನು ಕೇಳುತ್ತಿದ್ದ ಮಧುವರಸನ ಮನಸ್ಸು ಸಂತೋಷದಿಂದ ತುಂಬಿಬಂದಿತು.

ಮೊದಲು ಮಧುವರಸ ತಾನು ಉತ್ತಮ ಕುಲದವನೆಂದು ಅಹಂಕಾರದಿಂದ ಮೆರೆದಿದ್ದವನು. ಬಸವಣ್ಣನವರನ್ನು ತಿರಸ್ಕರಿಸುತ್ತಿದ್ದವನು. ಆದರೆ ಈಚೆಗೆ ಬಸವಣ್ಣನವರ ತತ್ವಗಳ ಮಹತ್ವವನ್ನು ಅರಿತುಕೊಂಡು ಅನುಭವ ಮಂಟಪಕ್ಕೆ ಬಂದಿದ್ದನು.

ಬಸವಣ್ಣನವರ ಈ ವಿವರಣೆಯನ್ನು ಕೇಳುತ್ತಾ ಮಧುವಯ್ಯನ ಮನಸ್ಸು ತನ್ನ ಹಿಂದಿನ ಕಾರ್ಯಗಳ ಬಗೆಗೆ ಪಶ್ಚಾತ್ತಾಪದಿಂದ ಕುದಿದು ನಿಚ್ಚಳವಾಗತೊಡಗಿತ್ತು. ಬಸವಣ್ಣ ಮಾತನ್ನು ಮುಗಿಸುವ ಮೊದಲೇ ಎದ್ದುನಿಂತ :

``ನಿಮ್ಮಿಂದ ಒಂದು ಹೊಸ ಸಂದೇಶವನ್ನು ಜಗತ್ತು ಇಂದು ಕಂಡುಕೊಳ್ಳುತ್ತಿದೆ, ಬಸವಣ್ಣನವರೇ. ನೀವು ಹೇಳುತ್ತಿರುವ ಈ ಮಾತುಗಳು ನಮ್ಮ ಸಂಪ್ರದಾಯದ ಉದ್ಧಾರಕ್ಕೆ ಹೊಸ ನಾಂದಿಯನ್ನು ಹಾಡುತ್ತಿರುವಂತಿದೆ.