ಪುಟ:Kadaliya Karpoora.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣದಿಂದ ಕದಳಿ

೨೧೩

ಪ್ರಭು ಮಂದಹಾಸದ ದೃಷ್ಟಿಯನ್ನು ಬಸವನತ್ತ ಬೀರಿ ಹೇಳಿದ :

``ನಿನ್ನ ಈ ನಿರಂಹಕಾರದ ಸಹಜವಾದ ವಿನಯ ಸಾಧಕರಿಗೆ ಕೈ ದೇವಿಗೆಯಾಗಿರಲಿ. ಈ

ವಿಷಯದಲ್ಲಿ ನಮ್ಮೆಲ್ಲರಿಗೂ ನೀನು ಗುರು ಬಸವಣ್ಣ :

ಅದ್ವೈತವ ನುಡಿದು ಅಹಂಕಾರಿಯಾದೆನಯ್ಯಾ

ಬ್ರಹ್ಮವ ನುಡಿದು ಭ್ರಮಿತನಾದೆನಯ್ಯಾ

ಶೂನ್ಯವ ನುಡಿದು ಸುಖದುಃಖಕ್ಕೆ ಗುರಿಯಾದೆನಯ್ಯಾ

ಗುಹೇಶ್ವರಾ, ನಿಮ್ಮ ಶರಣ ಸಂಗನ ಬಸವಣ್ಣನ

ಸಾನ್ನಿಧ್ಯದಿಂದಾನು ಸದ್ಭಕ್ತನಾದೆನಯ್ಯಾ.

ಪ್ರಭುವಿನ ಈ ವಚನವನ್ನು ಕೇಳಿ ಶರಣರೆಲ್ಲ ಬಸವಣ್ಣನನ್ನು ಕುರಿತು ಜಯ ಘೋಷ ಮಾಡಿದರು. ಬಸವಣ್ಣ ಭಕ್ತಿಯಿಂದ ಬಾಗಿ ಕುಳಿತ.

``ಇಂದು ಚೌಡಯ್ಯನವರಿಗೆ ನಾವು ಕೃತಜ್ಞತರಾಗಿರಬೇಕು. ಈ ಸಮಸ್ಯೆಯನ್ನೆತ್ತಿ ಅದರ ಮೇಲೆ ಬೆಳಕು ಬೀರುವಂತೆ ಮಾಡಿದವರು ಅವರು. ಮಧುವರಸ ಹೇಳಿದ.

``ನಿನ್ನ ಸಂಶಯಕ್ಕೆ ಉತ್ತರ ದೊರಕಿತೇ ಚೌಡಯ್ಯ ? ಪ್ರಭು ಕೇಳಿದ.

``ನನಗೆ ಬೇಕಾದುದಕ್ಕಿಂತ ಹೆಚ್ಚಾಗಿ ದೊರಕಿತು ಪ್ರಭುವೇ.

ಶರಣೆಯರ ಸಮೂಹದಲ್ಲಿ ಕುಳಿತು ಇದನ್ನೆಲ್ಲಾ ನೋಡುತ್ತಿದ್ದ ಮಹಾದೇವಿ ರೋಮಾಂಚನಗೊಂಡಳು. ಇಹಪರಗಳೆರಡರ ಸಮನ್ವಯವನ್ನು ರೂಪಿಸಿಕೊಳ್ಳುತ್ತಿರುವ ಸದ್ಗೋಷ್ಠಿ, ಅವಳಲ್ಲಿ ಅಪೂರ್ವ ಬೆಳವಣಿಗೆಯನ್ನುಂಟು ಮಾಡುತ್ತಿತ್ತು. ಅದನ್ನು ಕುರಿತು ತನ್ನಲ್ಲೇ ತಾನು ಹೀಗೆ ಹಾಡಿಕೊಂಡಳು :

ನೋಡಿ, ನುಡಿಸಿ ಮಾತನಾಡಿಸಿದೊಡೊಂದು ಸುಖ,

ಏನು ಮಾಡದಯ್ಯ ನಿಮ್ಮ ಶರಣರ ಅನುಭಾವ !

ಚೆನ್ನಮಲ್ಲಿಕಾರ್ಜುನಯ್ಯ

ನಿಮ್ಮ ಶರಣರ ಸದ್ಗೋಷ್ಠಿ ಏನಮಾಡದಯ್ಯ

``ಆಶೆಯಾಮಿಷಗಳು ಅಳಿದು, ಹುಸಿ ವಿಷಯಗಳೆಲ್ಲಾ ಹಿಂಗಿ, ಸಂಶಯ ಸಂಬಂಧ ವಿಸಂಬಂಧವಾಗುತ್ತದೆ, ಈ ಶರಣರ ಅನುಭಾವಗೋಷ್ಠಿಯಿಂದ ಎಂದುಕೊಂಡಿದ್ದಳು.

ಅಂದು ನಡೆದ ಈ ಅನುಭವಮಂಟಪದ ದೃಶ್ಯವೆಲ್ಲಾ ಮಹಾದೇವಿಯ ಮನಸ್ಸಿನ ಮುಂದೆ ಸುಳಿಯತೊಡಗಿತ್ತು. ಅಷ್ಟರಲ್ಲಿ ಅಪ್ಪಣ್ಣ ಬಳಿಗೆ ಬಂದ :