``ಶ್ರೀಗಿರಿಯ ಆಚೆ ಮಲ್ಲಿಕಾರ್ಜುನನನ್ನು ದಾಟಿಕೊಂಡು ಹೋದರೆ ಅಲ್ಲಿ ಕದಳಿಯ ವನವಿದೆಯೆಂದು ಹೇಳುತ್ತಾರೆ. ತಾವು ಶ್ರೀಶೈಲಕ್ಕೆ ಹೋದಾಗ ಅದನ್ನು....
ಮಹಾದೇವಿ ಕೇಳಲು ಅನುಮಾನಿಸುತ್ತಿದ್ದಳು. ಆದರೆ ಅವಳ ಮಾತಿನ ಅರ್ಥವನ್ನು ಅರಿತು ಪ್ರಭುದೇವ ಮಧ್ಯದಲ್ಲಿಯೇ ಹೇಳತೊಡಗಿದ :
``ಹೌದು ಮಹಾದೇವಿ, ಆ ಕದಳಿಯ ವನಕ್ಕೆ ನಾನು ಹೋಗಿದ್ದೆ. ಅಲ್ಲಿ ಕೆಲವು ದಿನಗಳು ಇದ್ದೆ.
ಅದನ್ನು ಕೇಳುತ್ತಿದ್ದಂತೆಯೇ ಮಹಾದೇವಿ ಅತ್ಯುತ್ಸಾಹ ಸಂಭ್ರಮದಿಂದ ಪ್ರಶ್ನಿಸಿದಳು :
``ಹೌದೇ ? ತಾವು ಅಲ್ಲಿಗೆ ಹೋಗಿದ್ದಿರಾ ? ಅಲ್ಲಿ ಏನಿದೆ ಗುರುಗಳೇ?
`ಕದಳಿ' ಎಂದ ಕೂಡಲೇ ಉಕ್ಕೇರಿದ ಮಹಾದೇವಿಯ ಮನಸ್ಸನ್ನು ಕಂಡ ಪ್ರಭುದೇವ ತನ್ನ ಅಭಿಪ್ರಾಯಗಳನ್ನು ದೃಢಪಡಿಸಿಕೊಂಡ. ಅವಳ ಮನಸ್ಸಿನ ಆಕಾಂಕ್ಷೆಯೇ, ಮಲ್ಲಿಕಾರ್ಜುನನ ಸಂಕಲ್ಪದೊಡನೆ ಸೇರಿ ತನ್ನ ಮನಸ್ಸಿನಲ್ಲಿ ಇಂದು ಮಾರ್ಪೊಳೆದು ತೋರಿರಬೇಕೆಂದು ಭಾವಿಸಿದ.
``ಆತುರಗೊಳ್ಳಬೇಡ ಮಹಾದೇವಿ, ಮೊದಲು ಅಂತರಂಗದ ಗರ್ಭಗೃಹವನ್ನು ಪ್ರವೇಶಿಸಿ ಅಲ್ಲಿ ಚನ್ನಮಲ್ಲಿಕಾರ್ಜುನನನ್ನು ಕಂಡುಕೊಳ್ಳಬೇಕು. ದೇಹವೆಂಬ ಶ್ರೀಗಿರಿಯ ಗಹ್ವರದಲ್ಲಿರುವ ಕದಳಿಯನ್ನು ಅವನನ್ನು ಸೇರಿದರೆ, ಬಹಿರಂಗದ `ಕದಳಿ'ಯ ರಹಸ್ಯ ತಾನಾಗಿಯೇ ತಿಳಿಯುತ್ತದೆ.
``ನಿಜ ಪ್ರಭುವೇ, ತಮ್ಮ ಆಶೀರ್ವಾದದಿಂದ ಮತ್ತು ಈ ಅಣ್ಣನ ಕರುಣೆಯಿಂದ, ಅದನ್ನು ಕಂಡುಕೊಳ್ಳುವ ಮಾರ್ಗದಲ್ಲಿ ನಾನು ನಡೆಯುತ್ತಿದ್ದೇನೆ ಬಸವಣ್ಣನತ್ತ ನೋಡುತ್ತಾ ಹೇಳಿದಳು.
``ನಿನ್ನ ಭಕ್ತಿಯ ಶಕ್ತಿಯೇ ನಿನ್ನನ್ನು ಅತ್ತ ಕೊಂಡೊಯ್ಯುತ್ತಿದೆ ಮಹಾದೇವಿ. ಇಂತಹ ಶಕ್ತಿಯನ್ನು ಪಡೆಯುವ ಭಾಗ್ಯ ಕಲ್ಯಾಣಕ್ಕೆ ಬಂದುದು ನಮ್ಮ ಪುಣ್ಯ.
ಮೆಚ್ಚಿ ನುಡಿದ ಬಸವಣ್ಣ.
``ಹಾಗೆ ಹೇಳುವುದು ನಿಮ್ಮ ಹಿರಿಯ ಗುಣ. ಆದರೆ :
ನಿನ್ನ ಅಂಗದ ಆಚಾರವ ಕಂಡು ಎನಗೆ ಲಿಂಗಸಂಗವಾಯಿತ್ತು
ಅಯ್ಯಾ ಬಸವಣ್ಣ : ನಿನ್ನ ಮನದ ಸುಜ್ಞಾನವ ಕಂಡು
ಎನಗೆ ಜಂಗಮ ಸಂಬಂಧವಾಯಿತಯ್ಯ
ಬಸವಣ್ಣಾ ! ಚೆನ್ನಮಲ್ಲಿಕಾರ್ಜುನನ ಹೆಸರಿಟ್ಟ ಗುರು
ನೀವಾದ ಕಾರಣ ನಾನೆಂಬುದಿಲ್ಲವಯ್ಯಾ.