ಪುಟ:Kadaliya Karpoora.pdf/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮

ಕದಳಿಯ ಕರ್ಪೂರ

``ಇದು ಔಪಚಾರಿಕವಲ್ಲ. ಇದರ ಒಂದೊಂದು ಮಾತೂ ಸತ್ಯ, ತಂದೆ.

``ಹೌದು, ತಾಯಿ ಮಹಾದೇವಿ. ಬಸವಣ್ಣನ ಭಕ್ತಿಯ ಫಲವನ್ನು ಚನ್ನಾಗಿ ಹೇಳಿದ್ದೀಯ. ಮೆಚ್ಚಿ ನುಡಿದ ಪ್ರಭುದೇವ.

``ಅಣ್ಣನು ತೋರಿದ ಅರಿವೇ ಮೂರ್ತಿಮತ್ತಾದ ಜಂಗಮರೂಪು ನೀವು ಪ್ರಭುವೇ. ನಿಮ್ಮ ಶ್ರೀಪಾದಕ್ಕೆ ಶರಣೆಂದು ಎನ್ನ ಅರಿವು ಸ್ವಯವಾಗುವಂತೆ ಮಾಡಿ ಉದ್ಧರಿಸಿರಿ. ಹೇಳಿದಳು ಮಹಾದೇವಿ.

ಈ ವೇಳೆಗೆ ಚನ್ನಬಸವಣ್ಣ ಬಂದು, ಬಿಜ್ಜಳ ರಾಜನಿಂದ ಬಸವಣ್ಣನಿಗೆ ಕರೆ ಬಂದಿರುವುದನ್ನು ತಿಳಿಸಿದ. ಪ್ರಭುವಿನ ಅಪ್ಪಣೆ ಪಡೆದು ಹೊರಟ ಬಸವಣ್ಣ. ಚನ್ನಬಸವಣ್ಣ ಅವನನ್ನು ಹಿಂಬಾಲಿಸಿದ.

``ಈ ಅಣ್ಣನ ಸಂಸಾರ ಬಹಳ ದೊಡ್ಡದು ಮಹಾದೇವಿ. ಬಹಳ ದೊಡ್ಡ ಆದರ್ಶವನ್ನು ಕಂಡು, ಅದನ್ನು ನನಸಾಗಿ ಮಾಡುವ ಸಾಹಸ ಆತನದು." ಬಸವಣ್ಣ ಹೋದತ್ತ ನೋಡುತ್ತಾ ಹೇಳಿದ ಪ್ರಭುದೇವ.

``ಹೌದು ಪ್ರಭುವೇ. ಇಡೀ ಮಾನವ ಸಮಾಜವನ್ನೇ ಉದ್ಧರಿಸಲು ಬದ್ಧ ಕಂಕಣರಾಗಿದ್ದಾರೆ ಅಣ್ಣನವರು. ಮಹಾದೇವಿ ದನಿಗೂಡಿಸಿದಳು.

``ನಿಜ. ಆದರೆ ಸಮಾಜ ಅಷ್ಟು ಸರಳವಾಗಿಲ್ಲ. ಈತನ ಪ್ರಯೋಗಗಳ ಫಲವನ್ನು ಅದು ಹೇಗೆ ಸ್ವೀಕರಿಸುತ್ತದೆಯೋ ಕಾದು ನೋಡಬೇಕು.

ಕ್ಷಣಕಾಲ ಮೌನವಾವರಿಸಿತು. ಅಣ್ಣನ ವ್ಯಕ್ತಿತ್ವವೇ ಅಲ್ಲಿ ಸಂಚಾರವಾಗುತ್ತಿರುವಂತೆ ತೋರುತ್ತಿತ್ತು. ಸ್ವಲ್ಪ ಕಾಲದ ಅನಂತರ ಮಹಾದೇವಿ ಕೇಳಿದಳು :

``ಅಂತರಂಗದ ಕದಳಿ, ಬಹಿರಂಗದ ಕದಳಿ ಎಂದಿರಿ. ಇವುಗಳ ಮರ್ಮವನ್ನು ವಿವರಿಸಬೇಕು ಗುರುದೇವಾ.

ಅವಳ ಮನಸ್ಸು ಓಡುತ್ತಿರುವ ದಿಕ್ಕನ್ನು ಈ ಪ್ರಶ್ನೆಯಿಂದಲೇ ತಿಳಿದುಕೊಂಡ ಅಲ್ಲಮಪ್ರಭು.

``ಶ್ರೀಶೈಲದಲ್ಲಿರುವ ಕದಳಿಯ ವನ, ಅತ್ಯಾಶ್ಚರ್ಯಕರವಾದ ಸನ್ನಿವೇಶ ಮಹಾದೇವಿ.

``ಅಲ್ಲಿಗೆ ಹೋದ ತಮ್ಮ ಅನುಭವಗಳನ್ನು ನಿರೂಪಿಸಬೇಕೆಂದು ಪ್ರಾರ್ಥಿಸುತ್ತೇನೆ.

``ಆ ಅನುಭವಗಳ ವರ್ಣನೆ ಇಂದು ಬೇಡ. ಇನ್ನೊಂದು ದಿನ ವಿವರವಾಗಿ ಹೇಳುತ್ತೇನೆ. ಇಂದು ಇಷ್ಟು ಹೇಳುತ್ತೇನೆ ಕೇಳು : ದೇಹದಲ್ಲಿ ಅಡಗಿರುವ