ಹೃದಯ ಗಹ್ವರದಂತೆ, ಶ್ರೀಶೈಲಪರ್ವತಗಳ ಸಾಲುಕಣಿವೆಯಲ್ಲಿ ಒಂದು ಗುಹೆ ಅಡಗಿದೆ. ಅದು ಸಾಧನೆಗೆ ತುಂಬಾ ಪ್ರಶಸ್ತವಾದ ಪ್ರಶಾಂತವಾದ ವಾತಾವರಣ. ಆ ಗುಹೆಯ ಮುಂಭಾಗದಲ್ಲಿ ಅಲ್ಲಲ್ಲಿ ಜಿನುಗುತ್ತಿರುವ ರಸದ ಒರತೆಯಿಂದ ಜೀವರಸವನ್ನು ಹೀರಿಕೊಂಡು ಅನೇಕ ಬಾಳೆಯಗಿಡಗಳು, ಸಾಧಕನ ಆತ್ಮರಕ್ಷಣೆಗೆ ನಿಂತ ಸತ್ವಶಕ್ತಿಗಳಂತೆ ಕಂಗೊಳಿಸುತ್ತಿವೆ. ಅದಾವ ಕಾಲದಿಂದ ಅಲ್ಲಿ ಬಾಳೆಗಳು ಬಂದು ನೆಲೆಗೊಂಡವೋ ; ಅಂತೂ ಅವುಗಳ ಸಂತಾನ ಅಲ್ಲಿ ಚಿರಂತನವಾಗಿದೆ. ಬಾಳನ್ನರಳಿಸುವಂತೆ ಬೆಳೆದು ನಿಂತಿರುವ ಆ ಕದಳಿಗಳಿಂದ ನಮ್ಮ ದೇಹಕದಳಿಯು ಬೆಳೆದು, ಆತ್ಮಕದಳಿಯ ಅಮರಸಂದೇಶವನ್ನು ಪಡೆಯುತ್ತದೆ.
ಕದಳಿಯಲ್ಲಿಯೇ ಇದ್ದಂತಾಗಿ ಪ್ರಭುದೇವ ತಲ್ಲೀನತೆಯಿಂದ ಕಣ್ಣುಮುಚ್ಚಿದ. ಕ್ಷಣಕಾಲ ಮೌನವಾವರಿಸಿತು. ಮತ್ತೆ ನಿಧಾನವಾಗಿ ಕಣ್ದೆರೆದು ಹೇಳತೊಡಗಿದ :
``ನಾವಲ್ಲಿಗೆ ಹೋದುದು ಸಾಧನೆಯ ಅನುಷ್ಠಾನಕ್ಕಾಗಿಯಲ್ಲ ; ಸಿದ್ಧಿಯ ಅನುಸಂಧಾನಕ್ಕಾಗಿ ಕೆಲವು ದಿನಗಳನ್ನು ಅಲ್ಲಿ ಕಳೆದೆ. ಅಲ್ಲಿನ ಆದಿವಾಸಿಗಳಾದ ಚುಂಚರು ಹತ್ತಿರದಲ್ಲಿಯೇ ಕೆಲವು ಗುಡಿಸಲುಗಳನ್ನು ಹಾಕಿಕೊಂಡಿದ್ದಾರೆ. ಪಾಪ! ಭಯಭರಿತ ವಿಶ್ವಾಸದಿಂದ ನನ್ನನ್ನು ಉಪಚರಿಸಿದರು. ನಾನಲ್ಲಿಯೇ ಇದ್ದು ಬಿಡುತ್ತಿದ್ದೆನೋ ಏನೋ ! ಆದರೆ ಬಸವಣ್ಣನ ಭಕ್ತಿಯ ಕರೆ ನನ್ನ ಹೃದಯದಲ್ಲಿ ಮೊರೆಯತೊಡಗಿತು. ನನ್ನ ಸಿದ್ಧಿಯ ಸಾರ್ಥಕತೆಯನ್ನು ಇಲ್ಲಿ ಪಡೆಯಬೇಕೆಂದು ಇತ್ತ ಬಂದೆ.
``ನಾನೂ ಅಲ್ಲಿಗೆ ಹೋಗಬೇಕೆಂಬ ಬಯಕೆ ಉಕ್ಕಿಬರುತ್ತಿದೆ ಗುರುಗಳೇ. ಅದೇಕೋ ಶ್ರೀಶೈಲವೆಂದಕೂಡಲೇ ನನ್ನ ಹೃದಯದ ತಂತಿಯನ್ನು ಯಾರೋ ಮೀಟಿದಂತಾಗುತ್ತದೆ. ಅದರಲ್ಲಿಯೂ ಆ ಕದಳಿ ! ಅದು ನನಗೆ ಚನ್ನಮಲ್ಲಿಕಾರ್ಜುನನ ಹೃದಯಮಂದಿರದಂತೆ ಭಾಸವಾಗುತ್ತದೆ. ಮಹಾದೇವಿ ತನ್ನ ಉತ್ಕಟ ಬಯಕೆಯನ್ನು ಅಡಗಿಸಿಕೊಳ್ಳಲಾರದೇ ಹೇಳಿದಳು :
ಪ್ರಭುದೇವನ ನಿರೀಕ್ಷೆ ನಿರ್ಧಾರವಾದಂತಾಗಿ ಹೇಳಿದ :
``ಅದು ನಿನ್ನ ಎಳೆಯತನದಲ್ಲಿ ಲಭಿಸಿದ ಸಂಸ್ಕಾರದ ಫಲವಿರಬಹುದು. ನಿನ್ನ ಬಯಕೆಯೇ ನನ್ನ ಚಿತ್ತದಲ್ಲಿ ಇಂದು ಬಿತ್ತರಿಸಿ ತೋರಿತು. ಹೋಗು, ಮಹಾದೇವಿ. ನಿನ್ನ ಪತಿ ಚನ್ನಮಲ್ಲಿಕಾರ್ಜುನನ ಹೃದಯಕಮಲದ ಕದಳಿಯಲ್ಲಿ ಸಮರ ಸುಖವನ್ನು ಪಡೆ. ಕದಳಿಯ ಕರ್ಪುರವಾಗಿ ಆತ್ಮದಾರತಿಯನ್ನು ಅರ್ಪಿಸು. ಆದರೆ ಹೋಗುವ ಮುನ್ನ ಅಂತರಂಗದ ಕದಳಿಯಲ್ಲಿ ಅರುಹಿನ ಕುರುಹನ್ನು ಕಾಣು :