ಕಾಯವೆಂಬ ಕದಳಿಯ ಹೊಕ್ಕು
ಪ್ರಾಣವೆಂಬ ಗಹ್ವರದೊಳಗೆ,
ಸಕಲೇಂದ್ರಿಯವೆಂಬ ಕೋಣೆಕೋಣೆಗಳಲ್ಲಿ,
ತಿರುಗಾಡುತ್ತಾ ಬರಲಾಗಿ,
ಮೇರು ಮಂದಿರದ ತ್ರಿಕೋಣೆಯಲ್ಲಿ ಬೆಳಗಾಯಿತ್ತು ;
ಗುಹೇಶ್ವರ ಲಿಂಗವೆಂಬೊಂದು ರೂಪಾಯಿತ್ತು
ಎಂದು ನಾನು ಹೇಳಿರುವ ವಚನದ ಅರ್ಥವನ್ನು ಮಥಿಸಿ, ಅದನ್ನು ಅನುಭವಕ್ಕೆ ತಂದುಕೋ.
``ಅದು ತಮ್ಮ ಅನುಗ್ರಹದಿಂದಲೇ ಆಗಬೇಕು.
``ಅದು ಆಗಲೇ ನಿನ್ನಲ್ಲಿ ರೂಪುಗೊಂಡು ಅವತರಿಸುತ್ತಿದೆ, ತಾಯಿ. ನಿನ್ನ ಕೈಯಲ್ಲಿರುವ ಇಷ್ಟಲಿಂಗದಲ್ಲಿಯೇ ನಿನ್ನ ಪತಿಯ ಸಮರಸ ಸ್ವರೂಪವನ್ನು ಕಂಡು ನಿನ್ನ ಸತೀಭಾವವನ್ನು ಅಲ್ಲಿ ನಿವೇದಿಸು. ಆಗ ಸತಿಪತಿಭಾವವೂ ಅಳಿದು ಉಭಯವೂ ಏಕವಾಗಿ ನಿಂದ ನಿಲವನ್ನು ಕಂಡುಕೊಳ್ಳುತ್ತೀಯ.
ಮನದ ಕೊನೆಯ ಮೊನೆಯ ಮೇಲೆ ನೆನೆದ ನೆನಹು,
ಜನನ ಮರಣವ ನಿಲಿಸಿ ;
ಜ್ಞಾನಜ್ಯೋತಿಯ ಉದಯ, ಭಾನುಕೋಟಿಯ ಮೀರಿ,
ಸ್ವಾನುಭಾವದ ಉದಯ, ಜ್ಞಾನಶೂನ್ಯದಲ್ಲಡಗಿದ
ಘನವನೇನೆಂಬೆ ಗುಹೇಶ್ವರಾ
ಮನದ ಕೊನೆಯ ನೆನಹಿನಿಂದ ಜನನ ಮರಣಗಳು ಅಳಿಯುತ್ತವೆ. ಮಹಾಜ್ಞಾನ ಉದಯವಾಗುತ್ತದೆ. `ಜ್ಞಾನವೂ ಶೂನ್ಯವಾದ' ಆ ಘನದಲ್ಲಿ ಕೂಡಿ ತಾನೇ ತಾನಾಗಿರುತ್ತದೆ.
ಬೆಳಕು ಕತ್ತಲೆಯ ನುಂಗಿ, ಒಳಗೆ ತಾನೊಬ್ಬನೇಯಾಗಿ,
ಕಾಂಬ ಕತ್ತಲೆಯ ಕಳೆದುಳಿದು
ನಿಮಗೆ ನಾನು ಗುರಿಯಾದೆ ಗುಹೇಶ್ವರಾ
ಎನ್ನುವಂತೆ ಕಾಯದ ಕತ್ತಲೆಯ ಕಳೆದುಕೊಂಡಾಗ, ಬಚ್ಚಬರಿಯ ಬೆಳಗು ಅಲ್ಲಿ ಮೂಡುತ್ತದೆ. ಮತ್ತೊಂದರ ಹಂಗಿಲ್ಲದ ಅವನಿಗೆ ನೀನು ಗುರಿಯಾಗಿ ಹೋಗುತ್ತೀಯ. ಉರಿಯ ಪರ್ವತವನ್ನು ಅರಗಿನ ಬಾಣದಿಂದ ಎಚ್ಚಂತೆ ಆಗುತ್ತದೆ. ಕರ್ಪುರದ ಗಿರಿಯನ್ನು ಉರಿಕೊಂಡಂತೆ ಆಗುತ್ತದೆ.