ಪುಟ:Kadaliya Karpoora.pdf/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨

ಕದಳಿಯ ಕರ್ಪೂರ

ಪ್ರಭುದೇವನು ಹೇಳಿದ ಮಾತುಗಳು ಆ ದಿನವೆಲ್ಲಾ ಮಹಾದೇವಿಯ ಮನಸ್ಸನ್ನು ತುಂಬಿ ಮೊರೆಯುತ್ತಿದ್ದವು. `ಸ್ವಾನುಭಾವದ ಉದಯ, ಜ್ಞಾನಶೂನ್ಯದಲ್ಲಡಗುವುದು,' `ಬೆಳಕು ಕತ್ತಲೆಯ ನುಂಗಿ ಒಳಗೆ ತಾನೊಬ್ಬನೇ ಆದೆ,' `ಸುಮನಮಂಟಪದಲ್ಲಿ ನಿತ್ಯನಿರಂಜನಪ್ರಭೆಯಾಗಿ ಹೊಳೆಯಬೇಕು' - ಈ ಮೊದಲಾದ ಮಾತುಗಳು ಜ್ಯೋತಿರ್ಲಿಂಗದಂತೆ ಅವಳ ಕಣ್ಣೆದುರು ಬಂದು ನಿಲ್ಲುತ್ತಿದ್ದುವು.

ಅಲ್ಲಮನು ನಿರೂಪಿಸಿದ ಸಮರಸಭಾವದ ಕೊನೆಯ ಹಂತವನ್ನು ಅನುಭಾವ ಪೂರ್ಣವಾಗಿ ಏರಿ ಅರಿಯಲು ಯತ್ನಿಸುತ್ತಿದ್ದಳು.

`ನಿನ್ನ ಸತೀಭಾವವನ್ನು ಅಲ್ಲಿ ನಿವೇದಿಸು. ಸತಿಪತಿಭಾವವೂ ಅಳಿದು, ಉಭಯವು ಏಕವಾಗಿ ನಿಂದ ನಿಲವನ್ನು ಕಂಡುಕೋ' - ಎಂದು ಹೇಳಿದ ಪ್ರಭುದೇವನ ಮಾತು ಮೊಳಗುತ್ತಿತ್ತು.

`ನಿಜ, ಈ ಸತಿಪತಿಭಾವದ ಆಧ್ಯಾತ್ಮಿಕ ರಹಸ್ಯವನ್ನು ನಾನು ಇಂದು ಅರಿಯಬಲ್ಲೆ. ನನ್ನ ಪತಿ ಚೆನ್ನಮಲ್ಲಿಕಾರ್ಜುನನನ್ನು ನಾನು ಮದುವೆಯಾಗಿದ್ದೇನೆ. ಆದರೆ ಅದು ಲೌಕಿಕ ಮದುವೆಯಲ್ಲ. ಅದು ಎಂತಹ ಮದುವೆ....' - ಹೀಗೆ ಆಲೋಚಿಸುತ್ತಿದ್ದಂತೆಯೇ ಅವಳ ಮನಸ್ಸಿನ ಮುಂದೆ ಒಂದು ಚಿತ್ರ ಸುಳಿಯಿತು. ಹೇಳಿದಳು ಈ ವಚನವನ್ನು :

ಜಲದ ಮಂಟಪದ ಮೇಲೆ, ಉರಿಯ ಚಪ್ಪರವನಿಕ್ಕಿ,

ಆಲಿಕಲ್ಲ ಹಸೆಯ ಹಾಸಿ,

ಕಾಲಿಲ್ಲದ ಹೆಂಡತಿಗೆ ತಲೆಯಿಲ್ಲದ ಗಂಡ ಬಂದು ಮದುವೆಯಾದನು.

ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ !

ಚೆನ್ನಮಲ್ಲಿಕಾರ್ಜುನ ಗಂಡಗೆನ್ನ ಮದುವೆ ಮಾಡಿದರು !

ಈ ಮಾತು ; ಈ ಕಲ್ಪನೆ ಅವಳ ಮನಸ್ಸಿಗೆ ತುಂಬಾ ಹಿಡಿಯಿತು. ಮತ್ತೆ ಮತ್ತೆ ಇದನ್ನು ಹೇಳಿಕೊಂಡಳು : `ಹೌದು, ನಾನು ಕಾಲಿಲ್ಲದ ಹೆಂಡತಿ, ಅವನು ತಲೆಯಿಲ್ಲದ ಗಂಡ. ನಮ್ಮ ಸಂಸಾರ ಎಂದೆಂದೂ ಬಿಡದ ಬಾಳುವೆ.'

ಆ ವಚನದ ಅರ್ಥವನ್ನು ಹಿಂಬಾಲಿಸಿ ಮತ್ತೆ ಆಲೋಚನೆಗೆ ತೊಡಗಿದಳು: `ದೇಹವೆಂಬ ಶ್ರೀಗಿರಿಯನ್ನೇರಿ, ಹೃದಯಕದಳಿಯ ಗರ್ಭದಲ್ಲಿ ನಿಂತು ಪಡೆಯಬೇಕು ಆ ಫಲವನ್ನು'