ಅಲ್ಲಮನ ಈ ಮಾತು ಅಂತರಂಗದಲ್ಲಿ ಬೆಳಕಿನ ಹೊನಲಾಗಿ ಹೊಮ್ಮಿ ಹರಿಯುತ್ತಿತ್ತು. ಅದನ್ನು ಹಿಂಬಾಲಿಸಿ ಮನಸ್ಸಿನ ಪದರ ಪದರಗಳನ್ನೇರಿ ಹೋಗಲು ಹವಣಿಸುತ್ತಾ ಧ್ಯಾನಾಸಕ್ತಳಾಗಿದ್ದಳು.
ಅಷ್ಟರಲ್ಲಿ ನೀಲಾಂಬಿಕೆ ಬಳಿಗೆ ಬಂದಳು ಮಹಾದೇವಿಯನ್ನು ಕರೆಯುತ್ತಾ:
``ಪ್ರಸಾದದ ವೇಳೆಯಾಗಿ ಎಷ್ಟು ಹೊತ್ತಾದರೂ ಇಂದು ಮಹಾದೇವಿಯನ್ನು ಕಾಣಲಿಲ್ಲ. ಈಗ ಅವಳನ್ನು ಕರೆದುಕೊಂಡು ಬರುತ್ತೇನೆ ಎಂದು ಗಂಗಾಂಬಿಕೆಗೂ ಇತರ ಶರಣೆಯರಿಗೂ ಹೇಳಿ ಮಹಾದೇವಿಯನ್ನು ಹುಡುಕಿಕೊಂಡು ಬಂದಿದ್ದಳು ನೀಲಾಂಬಿಕೆ.
ಅವಳು ಕರೆದುದನ್ನು ಕೇಳಿ ಮಹಾದೇವಿಯ ಮನಸ್ಸು ಕದಳಿಯ ಗುಹೆಯಿಂದ ಕೆಳಗಿಳಿದುಬಂದಿತು. ನಿಧಾನವಾಗಿ ಕಣ್ದೆರೆದಳು. ಅವಳ ಕಣ್ಣುಗಳಲ್ಲಿದ್ದ ಅಂತರ್ಮುಖ ಕಾಂತಿಯನ್ನು ಕಂಡು ಅಚ್ಚರಿಗೊಂಡಳು ನೀಲಾಂಬಿಕೆ. ತಾನು ಎಚ್ಚರಿಸಿದುದು ಅನುಚಿತವಾಯಿತೇನೋ ಎಂದು ಭಾವಿಸುತ್ತಾ ಹೇಳಿದಳು :
``ಕ್ಷಮಿಸು ಮಹಾದೇವಿ, ನಾನು ಬಂದುದು ನಿನ್ನ ಧ್ಯಾನಕ್ಕೆ ಭಂಗವನ್ನುಂಟು ಮಾಡಿತು.
``ಇಲ್ಲ, ತಾಯಿ. ಮಾತೃವಾತ್ಸಲ್ಯದ ರಕ್ಷಣೆ ಬಂದಂತಾಯಿತು. ಅಣ್ಣನ ಮಹತ್ಕಾರ್ಯಕ್ಕೆ ನೆರವಾಗುವ ದಾಸೋಹಂ ಭಾವದಲ್ಲಿಯೇ ಯೋಗವನ್ನು ಕಂಡುಕೊಂಡಿರುವ ನೀಲಮ್ಮ ತಾಯಿ, ನಿಮ್ಮೆಲ್ಲರ ಹರಕೆಯಿಂದ ನನ್ನ ಸಾಧನೆ ಪೂರ್ಣವಾಗಬೇಕು.
ನೀಲಮ್ಮ ಬಳಿಗೆ ಬಂದು ವಾತ್ಸಲ್ಯಭಾವದಿಂದ ಅವಳ ಮೈದಡವುತ್ತ,
``ಇರಲಿ ಏಳು, ಮಹಾದೇವಿ. ಇದೇಕೆ ಇಂದು ಇಷ್ಟು ಹೊತ್ತಾದರೂ ಇಲ್ಲಿಯೇ ಕುಳಿತುಬಿಟ್ಟಿರುವಿ? ಓಲೆಗರಿ ಪಕ್ಕದಲ್ಲಿ ! ಎಷ್ಟು ವಚನಗಳನ್ನು ರಚಿಸಿದೆ ಇಂದು ?
``ಹೆಚ್ಚಾಗಿ ಏನೂ ಬರೆಯಲಿಲ್ಲ. ಆದರೆ ಪ್ರಭುದೇವರು ಸೂಚಿಸಿದ ಒಂದು ಮಾತು ನನ್ನ ಮನಸ್ಸನ್ನು ನಾಟಿತು. ನನ್ನ ಸತಿಪತಿಭಾವವನ್ನು ಮೇಲಕ್ಕೆ ಎತ್ತಿತು. ಅದನ್ನೇ ಕುರಿತು ಆಲೋಚಿಸುತ್ತಿರುವಾಗ ಈ ಒಂದು ವಚನ ಬಂದಿತು.
ನೀಲಮ್ಮ ಅದನ್ನು ಓದಿದಳು. ಕ್ಷಣಕಾಲ ಮೌನವಾಯಿತು. ಅನಂತರ ಹೇಳಿದಳು :
``ಆಹಾ, ಎಂತಹ ಅರ್ಥಗರ್ಭಿತವಾದ ಮಾತುಗಳು ! ಜಲದ ಮಂಟಪ, ಉರಿಯ ಚಪ್ಪರ, ಆಲಿಕಲ್ಲ ಹಸೆ ; ಹೌದು, ಸಂಸಾರವ್ಯಾಮೋಹವೆಂಬ