ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೨೪
ಕದಳಿಯ ಕರ್ಪೂರ


ಕಾಲುಗಳಿಲ್ಲದ ಹೆಂಡತಿ ಈ ಜೀವ! ಭವಸಮುದ್ರದ ಬಂಧನವೆಂಬ ತಲೆಯನ್ನು ಕಳೆದುಕೊಂಡ ಆ ಶಿವ.... ಇದು ಸತಿಪತಿಭಾವದ ನಿಜವಾದ ನಿಲವು. ತುಂಬಾ ಸುಂದರವಾಗಿದೆ ಮಹಾದೇವಿ, ಈ ವಚನ ಎಂದು ಮೆಚ್ಚಿ ನುಡಿದಳು ನೀಲಮ್ಮ.

ಕೆಲವು ದಿನಗಳ ಹಿಂದೆ ಮಹಾದೇವಿ ಇದೇ ಭಾವವನ್ನು ಕುರಿತು ಹೇಳಿದ ಇನ್ನೊಂದು ವಚನವನ್ನು ನೆನೆಸಿಕೊಂಡಳು ನೀಲಮ್ಮ.

ಅಂದು ಅನುಭವಮಂಟಪದಲ್ಲಿ ಮಹಾದೇವಿ ಆ ವಚನವನ್ನು ಹೇಳಿದ್ದಳು. ಆಕೆ ಕಲ್ಯಾಣಕ್ಕೆ ಬಂದ ಹೊಸದು. ಶರಣರ ಒಡನಾಟದಿಂದ ಉಂಟಾದ ತೃಪ್ತಿಯನ್ನು ಅನೇಕ ವಚನಗಳಲ್ಲಿ ಹೇಳಿಕೊಂಡಿದ್ದಳು. ಅವುಗಳಲ್ಲಿ ಒಂದು ವಚನ, ಶರಣರು ಶಿವನಿಗೆ ತನ್ನನ್ನು ಕೊಟ್ಟು ಮದುವೆ ಮಾಡಿದ ಚಿತ್ರವನ್ನು ಹೇಳುತ್ತಿತ್ತು ;

<poem>ಪಚ್ಚೆಯ ನೆಲಗಟ್ಟು, ಕನಕದ ತೋರಣ, ವಜ್ರದ ಕಂಬ, ಪವಳದ ಚಪ್ಪರವನಿಕ್ಕಿ ಮದುವೆಯ ಮಾಡಿದರು ; ಎಮ್ಮವರೆನ್ನ ಮದುವೆಯ ಮಾಡಿದರು ; ಕಂಕಣ ಕೈಧಾರೆ ಸ್ಥಿರಸೇಸೆಯನಿಕ್ಕಿ ಚೆನ್ನಮಲ್ಲಿಕಾರ್ಜುನ ಗಂಡಗೆನ್ನ ಮದುವೆ ಮಾಡಿದರು.</poem>

``ಇದು ನೆನಪಿದೆಯೇ ಮಹಾದೇವಿ, ಅಂದು ನೀನು ಅನುಭವಮಂಟಪದಲ್ಲಿ ವರ್ಣಿಸಿದ ಶರಣಸತಿಯ ಮದುವೆಯ ಸಂಭ್ರಮ ?

ಮಹಾದೇವಿ ಅದನ್ನು ಸ್ಮರಿಸಿಕೊಂಡು, ಹಾಗೆಯೇ ಮುಗುಳುನಗೆಯನ್ನು ಬೀರಿದಳು. ಮತ್ತೆ ನೀಲಮ್ಮನ ಮಾತೇ ಮುಂದುವರಿಯಿತು :

``ಇಂದು ಈ ವಚನವನ್ನೂ ಅನುಭವಮಂಟಪದ ಮುಂದೆ ಇಡು. ಮಧುರ ಭಕ್ತಿಯ ವಿಕಾಸವನ್ನು ಅನುಭವಮಂಟಪ ಕಂಡುಕೊಳ್ಳಲಿ

``ಬೇಡ, ತಾಯಿ. ನನ್ನ ಅಂತರಂಗದ ವಿಕಾಸದ ಪ್ರದರ್ಶನ ನನಗೇಕೋ ಬೇಡವೆನ್ನಿಸುತ್ತಿದೆ.

ಈಚೀಚಿಗೆ ಮಹಾದೇವಿ ಹೆಚ್ಚು ಹೆಚ್ಚಾಗಿ ಅಂತರ್ಮುಖಳಾಗುತ್ತಿರುವುದು ನೀಲಮ್ಮನ ಗಮನಕ್ಕೆ ಬಾರದೇ ಇರಲಿಲ್ಲ. ಅನುಭವಮಂಟಪದ ಚರ್ಚೆಗಳಲ್ಲಿಯೇ ಆಗಲಿ, ಜಿಜ್ಞಾಸೆಗಳಲ್ಲಿಯೇ ಆಗಲೀ, ಮೊದಲಿನ ಉತ್ಸಾಹ ಮಹಾದೇವಿಯಲ್ಲಿ ಕಾಣುತ್ತಿರಲಿಲ್ಲ.

ಕಲ್ಯಾಣಕ್ಕೆ ಬಂದ ಮೊದಲು ಕೆಲವು ದಿನಗಳಲ್ಲಿ, ಅನುಭವಮಂಟಪದ ಚರ್ಚೆಯಲ್ಲಿ, ಮಹಾದೇವಿಯ ಮಾತಿನ ಬೆಳಕು ಹೆಜ್ಜೆ ಹೆಜ್ಜೆಗೂ ಬೆಳಗುತ್ತಿತ್ತು. ವೈಯಕ್ತಿಕವಾದ ಸಾಧನೆಯ ವಿಚಾರವಾಗಲೀ ಸಾಮಾಜಿಕವಾದ ಸಮಸ್ಯೆಯಾಗಲೀ