ನೀಲಮ್ಮ ಮಾತನ್ನೇನೂ ಆಡಲಾರದವಳಾದಳು. ಮಹಾದೇವಿಯನ್ನು ವಾತ್ಸಲ್ಯದಿಂದ ತಬ್ಬಿಕೊಂಡಳು. ಆನಂದಬಾಷ್ಪಗಳು ಕಣ್ಣಿಂದ ಉದುರುತ್ತಿರಲು ಹೇಳಿದಳು :
ನಿನ್ನಂತಹ ಮಗಳನ್ನು ಪಡೆದ ನಮ್ಮ ಜನ್ಮ ಸಾರ್ಥಕವಾಯಿತು. ಇರಲಿ, ಏಳು ಈಗ ; ಪ್ರಸಾದವನ್ನು ಸ್ವೀಕರಿಸಲು ಹೊತ್ತಾಯಿತು. ಶರಣೆಯರೆಲ್ಲಾ ನಿನಗಾಗಿ ಕಾಯುತ್ತಿದ್ದಾರೆ.
೪
ಅಂದು ರಾತ್ರಿ ಮಹಾದೇವಿಯ ಮನಸ್ಸು ಸಾಗರವನ್ನು ಸೇರಲು ಸಮೀಪಿಸುತ್ತಿರುವ ಮಹಾನದಿಯಂತೆ ಭೋರ್ಗರೆಯುತ್ತಿತ್ತು. ಎಂದಿಗಿಂತ ಮೊದಲೇ ಸ್ನಾನವನ್ನು ಮಾಡಿ ಪೂಜಾಗೃಹವನ್ನು ಪ್ರವೇಶಿಸಿದ್ದಳು.
ಇಂದು ಅವಳಿಗೆ ಅದು ಕೇವಲ ಪೂಜಾಗೃಹದಂತೆ ತೋರಲಿಲ್ಲ. ಸಾಕ್ಷಾತ್ ಚನ್ನಮಲ್ಲಿಕಾರ್ಜುನನ ಹೃದಯಕಮಲದಂತೆ ಕಂಡಿತು. ಕಳೆಗುಂದದ ಬೆಳಕನ್ನೀಯುವ ಮಿಂಚಿನರಮನೆಯಂತೆ ಗೋಚರಿಸಿತು. ತನ್ನಲ್ಲಿ ಸುಪ್ತವಾಗಿದ್ದ ಆವುದೋ ಶಕ್ತಿಯೊಂದು ಎಚ್ಚರಗೊಂಡು ಕೈಲಾಸಶಿಖರದಂತೆ ಮಹೋನ್ನತವಾಗಿ ಬೆಳೆದು, ತನ್ನನ್ನೂ ಮೇಲಕ್ಕೆತ್ತುತ್ತಿರುವಂತೆ ತೋರುತ್ತಿತ್ತು. ಸಜ್ಜೆಯಲ್ಲಿದ್ದ ಇಷ್ಟಲಿಂಗವನ್ನು ತೆಗೆದು ಕರಸ್ಥಳದಲ್ಲಿಟ್ಟು ಪೂಜೆಯನ್ನು ಪ್ರಾರಂಭಿಸಿದಳು.
ಶ್ರದ್ಧಾಭಕ್ತಿ, ನೈಷ್ಠಿಕಾಭಕ್ತಿಗಳ ಅವಲಂಬನೆಯಿಂದ ಅವಳ ಪೂಜೆ ಮೇಲೇರಿ ಅವಧಾನಭಕ್ತಿ, ಅನುಭಾವಭಕ್ತಿಗಳ, ಆತ್ಮಾರ್ಪಣೆ ಮತ್ತು ಯೋಗ ಮಾರ್ಗಗಳಲ್ಲಿ ಮುಂದುವರಿಯಿತು. ದೃಷ್ಟಿಯನ್ನು ಇಷ್ಟಲಿಂಗದಲ್ಲಿಟ್ಟು, ಲಿಂಗಾಂಗ ಸಾಮರಸ್ಯದ ಅನುವನ್ನು ತಾನು ಬೇರೆಯಾಗಿ ನಿಂತು ಅನುಭವಿಸುವ ಶರಣ ಸ್ಥಲದ ಆನಂದ ಭಕ್ತಿಯಾಗಿ ವ್ಯಾಪಿಸಿತು.
ಅವಳ ಚೈತನ್ಯಶಕ್ತಿ ಇಂದು ಇನ್ನೂ ಮೇಲೇರತೊಡಗಿತ್ತು. ಕೈಲಿರುವ ಲಿಂಗವೂ ಅದೃಶ್ಯವಾಗಿ ಬೆಳಕಿನ ಮಹಾಗೋಳವಾಗಿ ತಿರುಗುತ್ತಿರುವಂತೆ ಕಾಣಿಸಿತು. ದೇಹದ ಜಡಭಾಗವೆಲ್ಲಾ ಹಾಗೆಯೇ ಕರಗಿಹೋದಂತಾಗಿ ಆ ಭಕ್ತಿರಸದಿಂದ ಸಿಡಿದ ಬೆಳಕಿನ ಕುಡಿಯೊಂದು ಬೆಳೆಬೆಳೆದು ಕೈಲಿರುವ ಮಹಾ ಬೆಳಕಿನಲ್ಲಿ ಲೀನವಾದಂತಾಯಿತು. ಆನಂದವೂ ಅಳಿದು ಅಲ್ಲಿ ಸಮರಸ ಭಕ್ತಿಯ ನಿಲವು ಮಾತ್ರ ತಾನೇತಾನಾಗಿ ಮೈದೋರಿತು.