ಪುಟ:Kadaliya Karpoora.pdf/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣದಿಂದ ಕದಳಿ

೨೩೧

ಮಹಾದೇವಿ ಮಹದೇವನ ಅನುಸಂಧಾನದಲ್ಲಿ ಲೀನಳಾಗಿ ಸಮರಸಗೊಂಡಂತೆ ತೋರುತ್ತದೆ.

ತನ್ನ ನಿರೀಕ್ಷೆ ಫಲಿಸಿದ ಸಂತೋಷದಿಂದಲೆಂಬಂತೆ ಪ್ರಭುದೇವ ಬಸವಣ್ಣನತ್ತ ನೋಡಿದ.

``ಆ ಮಂಗಳದೃಶ್ಯವನ್ನು ನೋಡಬಹುದಲ್ಲವೇ, ಪ್ರಭುವೇ ? ಬಸವಣ್ಣ ತನ್ನ ಕುತೂಹಲವನ್ನು ವ್ಯಕ್ತಪಡಿಸಿದ.

``ನಡಿ ಬಸವಣ್ಣ. ನಿನ್ನ ಮಂಗಳಮಯವಾದ ದೃಷ್ಟಿಯ ರಕ್ಷಣೆಯನ್ನು ಆಕೆಗೆ ಕೊಡು ಎಂದು ಬಸವಣ್ಣನನ್ನು ಕರೆದುಕೊಂಡು ಅಕ್ಕನ ಪೂಜಾ ಗೃಹದತ್ತ ನಡೆಯತೊಡಗಿದ. ನೀಲಾಂಬಿಕೆ ಮುಂದೆ ನಡೆಯುತ್ತಾ ಒಳಗೆ ಕರೆದುಕೊಂಡು ಹೋದಳು.

ಬೆಳಕಿನ ಮಹಾಸಾಗರದಲ್ಲಿ ತನ್ನ ಅಂತರಂಗವನ್ನು ತೇಲಿಬಿಟ್ಟ ಮಹಾದೇವಿ ಅರುಹಿನ ಕುರುಹೇ ಮೂರ್ತಿಗೊಂಡಂತೆ ಅಚಲವಾಗಿ ಕುಳಿತಿದ್ದಾಳೆ. ದಿವ್ಯವಾದ ಬೆಳಕಿನ ಪ್ರಭೆಯೊಂದು ಅವಳ ದೇಹದ ಸುತ್ತ ತಿರುಗುತ್ತಿರುವಂತೆ ತೋರುತ್ತಿದೆ. ಪೂಜಾಗೃಹವೆಲ್ಲಾ ಅವಳ ಉಸಿರಿನÀ ಸುಗಂಧದಿಂದ ಪರಿಮಳಿತವಾಗಿದೆ.

ಪ್ರಭುದೇವ ಮತ್ತು ಬಸವಣ್ಣ ತುಂಬಿದ ಹೃದಯದಿಂದ ಅವಳನ್ನು ನೋಡಿದರು. ಅವಳ ಎದುರಿಗೆ ಅವರ ತಲೆಬಾಗಿತು :

``ಎಷ್ಟು ಹೊತ್ತಾಯಿತು ತಾಯಿ, ಮಹಾದೇವಿ ಪೂಜೆಗೆ ಕುಳಿತು ? ನೀಲಾಂಬಿಕೆಯನ್ನು ಕೇಳಿದ ಪ್ರಭುದೇವ.

``ತುಂಬಾ ಹೊತ್ತಾಯಿತು, ಸ್ವಾಮಿ. ಎಂದಿಗಿಂತ ಬಹಳ ಮುಂಚಿತವಾಗಿಯೇ ಪ್ರಾರಂಭಿಸಿದಳು ಈ ದಿನ. ನೀಲಮ್ಮ ಹೇಳಿದಳು.

ಪ್ರಭುದೇವ ಬಸವಣ್ಣನತ್ತ ನೋಡಿದ. ಬಸವಣ್ಣನಿಗೂ ಅರ್ಥವಾಗಿತ್ತು. ಆತ ಕೇಳಿದ :

``ಅಕ್ಕನನ್ನು ಈ ನಿಲವಿನಿಂದ ಕರೆದುತರುವುದು ತಾತ್ಕಾಲಿಕವಾಗಿಯಾದರೂ ಅವಶ್ಯಕವಲ್ಲವೇ, ಪ್ರಭುವೇ ?

``ಹೌದು, ಬಸವಣ್ಣ. ಇನ್ನು ಆ ನಿಲವು ಅಕ್ಕನಿಗೆ ಬಯಸಿದಾಗ ಕೈಗೂಡುವ ಸಹಜಸ್ಥಿತಿಯಾಗಿ ಪರಿಣಮಿಸುತ್ತದೆ. ಅದಕ್ಕಾಗಿ ಅವಳನ್ನು ಈಗ ಕ್ರಮೇಣ ಕೆಳಗಿಳಿದುಬರುವಂತೆ ಮಾಡಬೇಕು.

ಇವರ ಈ ಮಾತುಗಳು ಮಹಾದೇವಿಯ ಕಿವಿಯ ಮೇಲೆ ಬೀಳುತ್ತಿದ್ದರೂ ಅದರಿಂದ ಅವಳಲ್ಲಿ ಯಾವ ಪ್ರತಿಕ್ರಿಯೆಯೂ ಆಗಲಿಲ್ಲ. ಅವಳ ಮನಸ್ಸು ಮಹಾಮನಸ್ಸಿನಲ್ಲಿ ಲೀನವಾಗಿತ್ತು. ಮನಸ್ಸಿನ ಉಪಕರಣಗಳಾದ ಇಂದ್ರಿಯಗಳೆಲ್ಲಾ