ಪುಟ:Kadaliya Karpoora.pdf/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೨

ಕದಳಿಯ ಕರ್ಪೂರ

ತಮ್ಮ ಕರ್ತವ್ಯವನ್ನು ಸ್ತಬ್ಧಗೊಳಿಸಿದ್ದುವು. ಪ್ರಭುದೇವ ಕ್ಷಣಕಾಲ ಆಲೋಚಿಸಿ ಹೇಳಿದ :

``ನನ್ನ ಕೋಣೆಯಲ್ಲಿರುವ ಏಕನಾದವನ್ನು ತರಬೇಕು, ಬಸವಣ್ಣ.

ಬಸವಣ್ಣ ಹೋಗಲು ಉದ್ಯುಕ್ತನಾಗುತ್ತಿರುವಷ್ಟರಲ್ಲಿ ನೀಲಾಂಬಿಕೆ

ತಾನು ಆ ಕರ್ತವ್ಯವನ್ನು ವಹಿಸಿಕೊಂಡು ಹೊರಗೆ ನಡೆಯುತ್ತಿದ್ದಳು. ಏಕನಾದವನ್ನು ತಂದು ಪ್ರಭುವಿನ ಕೈಗಿತ್ತಳು. ಅವಳ ಜೊತೆಗೆ ಗಂಗಾಂಬಿಕೆಯೂ ಬಂದಿದ್ದಳು.

ಪ್ರಭುದೇವ ಏಕನಾದವನ್ನು ಕೈಗೆ ತೆಗೆದುಕೊಂಡ. ಮಹಾದೇವಿಗೆ ಸ್ವಲ್ಪ ದೂರದಲ್ಲಿ ಪೂಜೆಯ ಮಣೆಯ ಮೇಲೆ ಕುಳಿತ. ಅದರ ಇನ್ನೊಂದು ಪಕ್ಕದಲ್ಲಿ ಬಸವಣ್ಣ ಮತ್ತು ಗಂಗಾಂಬಿಕೆ, ನೀಲಾಂಬಿಕೆಯರು ಕುಳಿತರು.

ಏಕನಾದದ ತಂತಿಯ ಕಂಪನ ತನ್ನ ಶಬ್ದದ ಅಲೆಗಳನ್ನು ಕೋಣೆಯಲ್ಲೆಲ್ಲಾ ತುಂಬಿತು. ಅದರ ಹಿಂದೆಯೇ ಹೊರಟಿತು ಪ್ರಭುವಿನ ಗಂಭೀರವಾದ ವಾಣಿ. ಪ್ರಣವಪಂಚಾಕ್ಷರಿ ಮಂತ್ರವನ್ನು ನಾಲ್ಕಾರುಬಾರಿ ಘೋಷಿಸಿದ ಪ್ರಭು ಅನಂತರ ಒಂದು ಹಾಡನ್ನು ಹೇಳತೊಡಗಿದ:

ನಿಬ್ಬಣವೇನಾ ತ್ರಿಜಗದೊಳಗೆ |

ಮದುಮಕ್ಕಳ ಸುದ್ದಿಯ ಹೇಳಿರಮ್ಮ ||ಪ||

ಹೆಂಡತಿ ಗಂಡನ ಹಡೆದು ತೊಟ್ಟಿಲಗಟ್ಟಿ |

ಹಾಡಿ ಹರಸಿ ಮೈಮರೆದಾಳು ||೧||

ಪುರುಷರತ್ನವೆಂಬ ಪುತ್ರ ಜನಿಸಿಲಾಗಿ |

ಕಂಡವರೈವರು ಕಂಡು ಬೆರಗಾದರು ||೨||

ಮದುಮಕ್ಕಳ ನಿಲೆ ಮದುವೆಯ ಮಾತಲ್ಲ |

ಗುಹೇಶ್ವರಲ್ಲಯ್ಯ ತಾನದ ಬಲ್ಲ ||೩||

ಗಂಭೀರವಾದ ಧ್ವನಿ ಕೋಣೆಯನ್ನೆಲ್ಲಾ ತುಂಬಿ ಹೊರಹೊಮ್ಮುತ್ತಿರುವಂತೆ ಹೇಳತೊಡಗಿದ್ದ ಪ್ರಭು.

ಹಾಡು ಮುಗಿಯುವ ವೇಳೆಗೆ ಮಹಾದೇವಿಯ ನಿಶ್ಚಲದೇಹದಲ್ಲಿ ಸ್ವಲ್ಪ ಚಲನೆ ಕಂಡುಬಂದಿತು. ಮತ್ತೆ ನಾಲ್ಕಾರುಬಾರಿ ಮಂತ್ರಘೋಷವನ್ನು ಮಾಡಿದರು. ಹಿಮಾಲಯದ ಉತ್ತುಂಗಶಿಖರದಿಂದ ಇಳಿದುಬರುವವಳಂತೆ ಕ್ರಮೇಣ ಧ್ಯಾನಶ್ರೀ ಗಿರಿಯಿಂದ ಕೆಳಗಿಳಿಯತೊಡಗಿದ್ದಳು.