ಸಂಪೂರ್ಣವಾಗಿ ಎಚ್ಚೆತ್ತು ಸುತ್ತಲೂ ನೋಡಿದಳು. ಅಂತರಂಗದಲ್ಲಿ ಕಂಡ ಶಿವನೇ ಬಹಿರಂಗದಲ್ಲಿಯೂ ಬಹುರೂಪವಾಗಿ ಕಾಣುವಂತೆ ಎಲ್ಲರೂ ಗೋಚರಿಸಿದರು.
ಪ್ರಭುದೇವನ ಕೈಯ ಏಕನಾದ ಒಂದೇ ಸಮನೆ ಮಿಡಿಯುತ್ತಿತ್ತು. ಅದರಿಂದ ಸ್ಫೂರ್ತಿಗೊಂಡವಳಂತೆ ಮಹಾದೇವಿ ತನ್ನ ಅನುಭವವನ್ನು ಹಾಡತೊಡಗಿದಳು.
ಘನವ ಕಂಡೆ, ಅನುವ ಕಂಡೆ, ಆಯತವ ಕಂಡೆ,
ಸ್ವಾಯತವ ಕಂಡೆ, ಸನ್ನಿಹಿತವ ಕಂಡೆ ;
ಅರಿವನರಿದು ಮರಹ ಮರೆದೆ
ಕುರುಹಿನ ಮೋಹದ ಮರವೆಯನೀಡಾಡಿದೆ
ಚನ್ನಮಲ್ಲಿಕಾರ್ಜುನಾ ; ನಿಮ್ಮನರಿದು ಸೀಮೆಗೆಟ್ಟೆನು.
``ಹೌದು ಮಹಾದೇವಿ, ಅವನನ್ನರಿದು ನೀನು ನಿಸ್ಸೀಮಳಾಗಿದ್ದೀಯ. ಇಂದು ಅರಿವಿನ ಸ್ವಯಂಪ್ರಭೆಯ ಮೂರ್ತಿಯಾಗಿ ಪರಿಣಮಿಸಿದ್ದೀಯ. ಅಲ್ಲಮಪ್ರಭು ಉದ್ಗರಿಸಿದ.
ಆ ಮಾತು ಅವಳಿಗೆಲ್ಲೋ ಕನಸಿನಲ್ಲಿ ನುಡಿದಂತೆ ತೋರಿತು. ಅನುಭಾವ ಸಾಗರದಲ್ಲಿ ಬೆಳಕಿನ ದೇಹವನ್ನು ಹೊತ್ತು ಇನ್ನೂ ಈಜುತ್ತಿರುವಂತೆಯೇ ಆಕೆಗೆ ಅನಿಸುತ್ತಿತ್ತು ; ಆ ಪರಮಾನಂದದ ಅಲೆಗಳ ಮೇಲೆ ತೇಲುತ್ತಿರುವಂತೆ ಅತ್ತಿತ್ತ ಒಲೆಯುತ್ತಾ ಮತ್ತೆ ಹೇಳಿದಳು.
ಲಿಂಗವೆನ್ನೆ ಲಿಂಗೈಕ್ಯವೆನ್ನೆ ; ಸಂಗವೆನ್ನೆ, ಸಮರಸವೆನ್ನೆ,
ಆಯಿತೆನ್ನೆ, ಆಗದೆನ್ನೆ ; ನೀನೆನ್ನೆ, ನಾನೆನ್ನೆ,
ಚನ್ನಮಲ್ಲಿಕಾರ್ಜುನನಲ್ಲಿ ಲಿಂಗೈಕ್ಯವಾದ ಬಳಿಕ ಏನೂ ಎನ್ನೆ.
ಈಗ ಬಸವಣ್ಣ ಹೇಳಿದ : ``ಸಾವಿಲ್ಲದ ಕೇಡಿಲ್ಲದ ಚಲುವನ್ನ ಒಲಿದು, ನೀನು ಸಾಕ್ಷಾತ್ ಮಹಾದೇವಿಯೇ ಆಗಿದ್ದೀಯ, ತಾಯಿ.
ಮಹಾದೇವಿ ಅತ್ತಿತ್ತ ನೋಡುತ್ತಿದ್ದರೂ ತನ್ನದೇ ಲೋಕದಲ್ಲಿದ್ದವಳಂತೆ ಮತ್ತೆ ಹೇಳತೊಡಗಿದಳು :
ಮೂಲಾಧಾರದ ಬೇರ ಮೆಟ್ಟಿ ಭೂಮಂಡಲವನ್ನೇರಿದೆ ;
ಆಧಾರದ ಬೇರು ಹಿಡಿದು, ಐಕ್ಯದ ತುದಿಯನ್ನೇರಿದೆ ;
ವೈರಾಗ್ಯದ ಸೋಪಾನದಿಂದ ಶ್ರೀಪರ್ವತವನ್ನೇರಿದೆ ;
ಕೈವಿಡಿದು ತೆಗೆದುಕೊಳ್ಳಾ ಚೆನ್ನಮಲ್ಲಿಕಾರ್ಜುನಾ.