ಮಹಾಮನೆ. ಮಹಿಮಾನ್ವಿತವಾದ ಮೌನವನ್ನು ಬೀರುತ್ತಾ ಧಾನ್ಯಲೀನವಾದಂತಿತ್ತು. ಅಧ್ಯಯನದಲ್ಲಿ ತೊಡಗಿದ್ದ ಚನ್ನಬಸವ ಸಿದ್ಧರಾಮರು ತಮ್ಮ ಕೋಣೆಯಿಂದ ಪ್ರಭುದೇವ ಬಸವರನ್ನು ಕಂಡು ಹೊರಗೆ ಬಂದರು.
ಆ ಪ್ರಶಾಂತವಾದ ಮಂಗಳಕರ ಸನ್ನಿವೇಶದಲ್ಲಿ, ಮಂಗಳಮಯಿ ಮಹಾದೇವಿಯ ಮಹೋನ್ನತವಾದ ಸಾಕ್ಷಾತ್ಕಾರದ ಮಾತು, ಈ ಶರಣರ ಅನುಭಾವದ ವಿಷಯವಾಗಿ ಪರಿಣಮಿಸಿತು. ಇದನ್ನು ಕೇಳಿ ಧನ್ಯತೆಯ ಉದ್ಗಾರವನ್ನು ತೆಗೆಯುವಂತೆ ಚಂದ್ರ ಉತ್ಸಾಹಗೊಂಡು ದ್ವಿಗುಣವಾದ ತನ್ನ ಕಾಂತಿ ಕಿರಣಗಳನ್ನು ಸುರಿಸತೊಡಗಿದನು.
೫
ಮಹಾದೇವಿ ಇನ್ನು ಬಹುಕಾಲ ಕಲ್ಯಾಣದಲ್ಲಿ ಇರಲಾರಳೆಂಬ ಪ್ರಭುದೇವನ ಊಹೆ ನಿಜವಾಗಿ ಪರಿಣಮಿಸಿತು. ಮರುದಿನವೇ ಆಕೆ ತನ್ನ ಆಕಾಂಕ್ಷೆಯನ್ನು ತಿಳಿಸಲು ಪ್ರಭುದೇವನ ಬಳಿಗೆ ಬಂದಳು. ಬಸವಣ್ಣ, ಚನ್ನಬಸವಣ್ಣರೂ ಆಗ ಅಲ್ಲಮನ ಬಳಿಯಲ್ಲಿದ್ದರು.
ಪ್ರಭು ಮಹಾದೇವಿಯನ್ನು ನೋಡಿ ಮಂದಹಾಸವನ್ನು ಬೀರುತ್ತಾ :
``ಬಿಂದು ಸಿಂಧುವನ್ನು ಸೇರಿದಂತಾಯಿತೇ, ಮಹಾದೇವಿ ?
``ಅಲ್ಲ ಪ್ರಭುವೇ, ನನಗನಿಸುತ್ತದೆ ಸಾಗರವು ಸಾಗರವನ್ನು ಸೇರಿದಂತಾಯಿತು ಎಂದು. ಅಕ್ಕನಿಗಿಂತ ಮೊದಲು ಚನ್ನಬಸವಣ್ಣ ಉತ್ತರಿಸಿದ.
``ಚೆನ್ನಾಗಿ ಹೇಳಿದೆ, ಚನ್ನಬಸವ. ಪ್ರಭು ಉತ್ತರಿಸಿದ.
``ಈ ಅನುಭಾವದ ಮಥನದಿಂದ ಕಲ್ಯಾಣದ ಕಡಲು ಭಕ್ತಿ ಸಾಗರದಲ್ಲಿ ಉಕ್ಕಿ ಹರಿಯುತ್ತಿದೆ ಬಸವಣ್ಣ ಮಹಾದೇವಿಯ ಸಾಧನೆಯನ್ನು ಹೊಗಳಿದ.
ಅಕ್ಕಮಹಾದೇವಿ ವಿನೀತಳಾಗಿ ಹೇಳಿದಳು: ``ಈ ಸಾಧನೆಯೆಲ್ಲಾ ನಿಮ್ಮ ಪ್ರಸಾದ
ಎನ್ನ ಭಕ್ತಿ ನಿಮ್ಮ ಧರ್ಮ.
ಎನ್ನ ಜ್ಞಾನ ಪ್ರಭುದೇವರ ಧರ್ಮ.
ಎನ್ನ ಪರಿಣಾಮ ಚನ್ನಬಸವಣ್ಣನ ಧರ್ಮ.
ಈ ಮೂವರೂ ಒಂದೊಂದು ಕೊಟ್ಟರೆನಗೆ ; ಮೂರು ಭಾವವಾಯಿತ್ತು.
ಆ ಮೂರನ್ನು ನಿಮ್ಮಲ್ಲಿ ಸಮರ್ಪಿಸಿದ ಬಳಿಕ ಎನಗಾವ ಜಂಜಡವಿಲ್ಲ
ಚನ್ನಮಲ್ಲಿಕಾರ್ಜುನದೇವರ ನೆನಹಿನಲ್ಲಿ ಕರುಣದ ಶಿಶು ನಾನು ಕಾಣಾ