ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೩೬
ಕದಳಿಯ ಕರ್ಪೂರ


ಸಂಗನ ಬಸವಣ್ಣ.

``ಹೌದು, ತಾಯಿ... ಬಸವಣ್ಣನ ಕರುಣೆಯ ಶಿಶುವಾಗಿ ಇನ್ನು ಈಗ ಕಲ್ಯಾಣದಲ್ಲಿ ಬಹುಕಾಲ ನಿನ್ನ ಕಾಂತಿಯನ್ನು ಬೀರು, ತಾಯಿ. ಪ್ರಭು ಹೇಳಿದ.

ತಾನು ಹೇಳಲು ಬಂದ ಮುಖ್ಯವಾದ ಮಾತನ್ನು ನಿರೂಪಿಸಲು ಈ ಅವಕಾಶ ಸಿಕ್ಕಂತಾಯಿತು ಮಹಾದೇವಿಗೆ.

``ಕ್ಷಮಿಸಬೇಕು, ಪ್ರಭುವೇ. ಅದನ್ನು ಕುರಿತು ಅರಿಕೆ ಮಾಡಿಕೊಳ್ಳಬೇಕೆಂದೇ ಈಗ ಇಲ್ಲಿಗೆ ಬಂದಿದ್ದೇನೆ. ಈ ಅಣ್ಣನ ಕರುಣೆಯ ಶಿಶುವಾಗಿ ನಾನಿಲ್ಲಿಗೆ ಬಂದೆ. ನಿಮ್ಮ ವರಪ್ರಸಾದದಿಂದ ನನ್ನ ಮೆಚ್ಚಿನ ವರನನ್ನು ಪಡೆದೆ. ಇನ್ನು ಅವನ ಬಳಿಗೆ ಹೋಗಲು ಅಪ್ಪಣೆಯನ್ನು ಅನುಗ್ರಹಿಸಬೇಕು ಎಂದು ಪಾರ್ರಂಭಿಸಿ ಮಹಾದೇವಿ ತನ್ನ ಮನೋಗತವಾದ ಅಭಿಪ್ರಾಯಗಳನ್ನೆಲ್ಲಾ ತಿಳಿಸಿದಳು.

ಶ್ರೀಶೈಲಪರ್ವತ ಹೀಗೆ ಅವಳನ್ನು ಕೈಬೀಸಿ ಕರೆಯುತ್ತಿದೆಯೆಂಬುದನ್ನು ಮೊದಲೇ ತಿಳಿದಿದ್ದ ಪ್ರಭು ಇದರಿಂದ ಆಶ್ಚರ್ಯಗೊಳ್ಳಲಿಲ್ಲ. ಆದರೆ ಬಸವಣ್ಣನನ್ನು ಒಪ್ಪಿಸುವುದು ಸ್ವಲ್ಪ ಕಷ್ಟವೇ ಆಯಿತು. ಇಷ್ಟು ಜಾಗ್ರತೆ ಕಲ್ಯಾಣ, ಮಹಾದೇವಿಯನ್ನು ಕಳೆದುಕೊಳ್ಳಬೇಕಾಗಬಹುದೆಂದು ಊಹಿಸಿರಲಿಲ್ಲ. ಅವಳ ನಿರ್ಧಾರವನ್ನು ಕದಲಿಸಲು ಪ್ರಯತ್ನಿಸಿದ.

``ಇದೇಕೆ ಮಹಾದೇವಿ, ಇನ್ನೂ ನಿನಗೆ ಈ ಭ್ರಾಂತಿ ! ನಿನ್ನ ಹೃದಯದಲ್ಲಿ ಏಕರಸವಾಗಿ ಬೆರೆತು ಎರಡಿಲ್ಲದಂತಿರುವವನು ಆ ಚನ್ನಮಲ್ಲಿಕಾರ್ಜುನ. ಅವನನ್ನು ಕಾಣಲು ಶ್ರೀಶೈಲಕ್ಕೆ ನೀನು ಹೋಗಬೇಕೆ ! ಕದಳಿವನದಲ್ಲಿಯೇ ಅವನನ್ನು ಕಂಡುಕೊಳ್ಳಬೇಕೇ ?

``ಇಲ್ಲ, ಅಣ್ಣಾ ! ನಿನ್ನ ದಯೆಯಿಂದ ಆ ಭ್ರಾಂತಿ ನನಗಿಲ್ಲ. ಹೇಳಿದಳು ಮಹಾದೇವಿ. ``ಶ್ರೀಗಿರಿಯೇ ನಿನ್ನ ಸಾನಿಧ್ಯವನ್ನು ಬಯಸಿ ಬರುವಂತೆ ಮಾಡುವ ಮಹಾಮಹಿಮ ನೀನು. ಆ ಶ್ರೀಗಿರಿಯೇ ನನ್ನ ಹೃದಯಕಮಲದಲ್ಲಿಯೂ ಮೂಡಿ ನಿಂತಿದೆ ನಿಜ. ಆದರೆ ಅಲ್ಲಿ ಜ್ಯೋತಿರ್ಲಿಂಗಸ್ವರೂಪನಾಗಿ ಮೂಡಿರುವ ಮಲ್ಲಿಕಾರ್ಜುನನನ್ನು ಅಗಲಿ, ಈ ಅಲೌಕಿಕ ಜಗತ್ತಿನಲ್ಲಿ ಬಹು ಕಾಲ ನಾನಿನ್ನು ಇರಲಾರೆ. ಅವನ ಹೃದಯವನ್ನು ಬೆರೆದು ಎಂದೆಂದೂ ಬಿಡದ ಬಾಳುವೆಗೆ ಗುರಿಯಾಗಬೇಕೆಂದು ನನ್ನ ಅಂತರಂಗ ಆತುರಪಡುತ್ತಿದೆ. ಅದರ ಜೊತೆಗೆ ಪವಿತ್ರ ಭಾವನೆಯ ಸಂಕೇತಸ್ವರೂಪವನ್ನು ಪಡೆದಿರುವ ಬಹಿರಂಗದ ಶ್ರೀಗಿರಿಯನ್ನು ಏರಿ ಅದರ ಅಂತರಂಗದಸ್ವರೂಪವಾದ ಕದಳಿಯ ವನದಲ್ಲಿ ಈ ಭೌತದೇಹ, ಪರಿವರ್ತನೆಯನ್ನು ಪಡೆಯಲಿ ಎಂದು ನನ್ನ ಆಸೆ ಅಷ್ಟೆ.