ಪುಟ:Kadaliya Karpoora.pdf/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೮

ಕದಳಿಯ ಕರ್ಪೂರ

ಬಸವಣ್ಣ ಈಗ ಮೇಲೆದ್ದ. ಅವನ ಮುಖವೇ ಅವನ ಮನಸ್ಸಿನ ಉದ್ವೇಗವನ್ನು ಸೂಚಿಸುವಂತಿತ್ತು. ಗದ್ಗದ ಸ್ವರದಿಂದ ಹೇಳಿದ :

``ಪ್ರಭುದೇವರು ಹೇಳಿದಂತೆ ನಾಳೆ ಬೆಳಿಗ್ಗೆಯೇ ಅಕ್ಕಮಹಾದೇವಿಯನ್ನು ಕಳುಹಿಸಿಕೊಡಬೇಕಾಗಿದೆ. ಇಂತಹ ಮಹಾಚೇತನವನ್ನು ಬಹುಕಾಲ ನಮ್ಮ ಮಧ್ಯದಲ್ಲಿ ಉಳಿಸಿಕೊಳ್ಳುವ ಭಾಗ್ಯ ನಮಗಿಲ್ಲ. ಮಹಾದೇವಿಯ ವ್ಯಕ್ತಿತ್ವವನ್ನು ಕುರಿತು ಈಗ ನಾನು ಏನನ್ನೂ ಹೇಳಲಾರೆ. ಅದರ ಅಗತ್ಯವೂ ಇಲ್ಲ. ನೋಡಲು ಆಕೆಯದು ಹೆಣ್ಣುರೂಪು. ಆದರೆ ಎಲ್ಲ ರೂಪವನ್ನು ಮೀರಿನಿಂತ ಮಹಾಂತಮೂರ್ತಿ ಅದು :

ಹೆಂಗೂಸಿನಂಗವ ನೋಡಿರೆ ಪುರಾತನರು |

ಬಾಲತನದಂಗವ ನೋಡಿರೆ ಪುರಾತನರು

ಬ್ರಹ್ಮವನಾಚರಿಸಿ ತನ್ನ ಮರೆದಿಪ್ಪುದ ನೋಡಿರೆ ಲಿಂಗವಂತರು |

ತನ್ನಲ್ಲಿ ತಾನು ನಿಶ್ಚಯವಾಗಿ ಭಾಷೆಬೀಸರವೋಗದೆ ಇಪ್ಪ ಇರವು,

ಕೂಡಲಸಂಗಮದೇವರಲ್ಲಿ ನಮ್ಮ ಮಹಾದೇವಿಯಕ್ಕಂಗಾಯಿತ್ತು

ಬಸವಣ್ಣನ ಮಾತು ಮುಗಿಯುತ್ತಿದ್ದಂತೆಯೇ ಚನ್ನಬಸವಣ್ಣ ಎದ್ದು ನಿಂತು ಹೇಳತೊಡಗಿದ:

ತನುವಿನೊಳಗಿದ್ದು ತನುವ ಗೆದ್ದಳು,

ಮನದೊಳಗಿದ್ದು ಮನವ ಗೆದ್ದಳು,

ವಿಷಯದೊಳಗಿದ್ದು ವಿಷಯಂಗಳ ಗೆದ್ದಳು.

ಅಂಗಸಂಗವ ತೊರೆದು ಭವವ ಗೆದ್ದಳು,

ಕೂಡಲಚನ್ನ ಸಂಗಯ್ಯನ ಹೃದಯಕಮಲವ ಬಗಿದು ಹೊಕ್ಕು,

ನಿಜಪದವನೈದಿದ ಮಹಾದೇವಿಯಕ್ಕನ ಶ್ರೀಪಾದಕ್ಕೆ

ನಮೋ ನಮೋ ಎನುತಿರ್ದೆನು

ಹೃದಯತುಂಬಿ ತುಳುಕಿದಂತೆ ಚಿಮ್ಮಿ ಬರುತ್ತಿದ್ದ ಚನ್ನಬಸವಣ್ಣನ ಒಂದೊಂದು ಮಾತುಗಳೂ ಶರಣರ ಮನಸ್ಸನ್ನು ನೇರವಾಗಿ ತಾಗುತ್ತಿದ್ದವು.

ಮಡಿವಾಳ ಮಾಚಯ್ಯ ಭಾವೋದ್ವೇಗದಿಂದ ಎದ್ದು ನಿಂತು, ಮಹಾದೇವಿಗೆ ನಮಸ್ಕರಿಸಿದ. ಸಭೆಗೆಲ್ಲಾ ವಂದಿಸಿದ ಮತ್ತು ಹೇಳತೊಡಗಿದ :

ಕಂಗಳ ನೋಟ ಕರಸ್ಥಲದ ಪ್ರಾಣ,

ಅಂಗವಿಕಾರ ನಿರ್ವಿಕಾರವಾಯಿತ್ತು,

ಸಂಗಸುಖ ನಿಸ್ಸಂಗವಾಯಿತ್ತು,