ಶಿಶುವನ್ನು ಕಣ್ಣು ತುಂಬಾ ನೋಡಿ ಅಲ್ಲಿಂದ ಹೊರಟರು.
ಈ ಹಿಂದಿನ ಚಿತ್ರವೆಲ್ಲವೂ ಇಂದು ಓಂಕಾರನ ಮನಸ್ಸಿನ ಮುಂದೆ ಸುಳಿಯಿತು.
‘ಅಂದು ಹೇಗೆ ಮರುಳುಸಿದ್ಧೇಶ್ವರರು ಅನಿರೀಕ್ಷಿತವಾಗಿ, ಆದರೂ ಇದೇ ಉದ್ದೇಶಕ್ಕಾಗಿಯೇ ಎಂಬಂತೆ, ಬಂದು ಅನುಗ್ರಹಿಸಿದ್ದರೋ ಅಂತೆಯೇ ಇಂದು ಗುರುಲಿಂಗದೇವರು ಶ್ರೀಶೈಲದಿಂದ ಬಂದೊಡನೆಯೇ ತಾವಾಗಿಯೇ ಬಂದು ಇಷ್ಟಲಿಂಗ ಸಂಬಂಧನ್ನೀಯಲು ಉದ್ಯುಕ್ತರಾಗಿದ್ದಾರೆ. ನನ್ನ ಮಗಳ ಭಾಗ್ಯ ಬಹಳ ದೊಡ್ಡದು’. ಯೋಚಿಸುತ್ತಿದ್ದಂತೆಯೇ ಅಂದು ಮರುಳುಸಿದ್ಧರು ಹೇಳಿದ ಮಾತು, ಮತ್ತೆ ಮತ್ತೆ ಕಿವಿಯಲ್ಲಿ ಮೊರೆಯಿತು:
“ಹೆಣ್ಣುತನದ ಮಹಾಸಾಧನೆಯ ಸಂಕೇತ ಈಕೆ.”
‘ಆದಾವ ಮಹಾಸಾಧನೆಯನ್ನು ದೈವಶಕ್ತಿ ಇವಳ ಮೂಲಕ ನೆರವೇರಿಸಿ ಕೊಳ್ಳುತ್ತದೆಯೋ’-ಎಂದು ಆಲೋಚಿಸುತ್ತಾ, ತನ್ನ ಗೆಳತಿಯರಿಗೆ ಶ್ರೀಶೈಲವನ್ನು ವರ್ಣಿಸುವುದರಲ್ಲಿ ತನ್ಮಯಳಾಗಿದ್ದ ಮಹಾದೇವಿಯನ್ನು ನೋಡಿದ ಓಂಕಾರ.
ತನ್ನ ಹಾಗೆಯೇ ಗುರುಗಳಿಗೂ ಆ ದಿನದ ಘಟನೆ ಮನಸ್ಸಿನಲ್ಲಿ ಸುಳಿದಿದ್ದಿ ತೆಂಬುದು ಸಂಜೆ ಅವರು ಮಾತನಾಡುವಾಗ ತಿಳಿಯಿತು.
“ಆ ದಿನದ ಜ್ಞಾಪಕವಿದೆಯೇ ಓಂಕಾರ, ಮರುಳುಸಿದ್ಧರು ಬಂದು ಹೋದ ದಿನ?” ಕೇಳಿದರು ಗುರುಗಳು.
“ಅದನ್ನು ಮರೆಯುವೆನೇ, ಗುರುಗಳೇ!” ಎಂದು ಓಂಕಾರ ಕ್ಷಣಕಾಲ ಬಿಟ್ಟು ಮತ್ತೆ ಹೇಳಿದ: “ಆ ದಿನದಷ್ಟೇ ಅಚ್ಚರಿ ಸಂತೋಷಗಳು ಈ ದಿನವೂ ನನಗೆ ಉಂಟಾಗಿವೆ. ಶ್ರೀಶೈಲದಿಂದ ಬಂದೊಡನೆ ತಾವು ಅನಿರೀಕ್ಷಿತವಾಗಿ ದೀಕ್ಷಾಕಾರ್ಯವನ್ನು ಕೈಕೊಂಡಿದ್ದು...”
“ಇದಕ್ಕೂ ಮರುಳುಸಿದ್ಧರೇ ಕಾರಣರು ಅಥವಾ ಮಲ್ಲಿಕಾರ್ಜುನನೇ ಆ ರೂಪಿನಲ್ಲಿ ಬಂದು ನುಡಿದನೋ ತಿಳಿಯದು. ಶ್ರೀಶೈಲದಲ್ಲಿರುವಾಗ ಒಂದು ಅಲೌಕಿಕವಾದ ಅನುಭವ ನನಗೆ ಉಂಟಾಯಿತು....”
ಕುತೂಹಲವೇ ಮೈಯಾಗಿ ಕುಳಿತ ಓಂಕಾರ. ಮತ್ತೆ ಗುರುಗಳೇ ಮುಂದು ವರಿಸಿದರು:
“ಒಂದು ದಿನ ಮಧ್ಯಾಹ್ನ ಶ್ರೀಶೈಲದಲ್ಲಿ, ದೇವಾಲಯದ ಆವರಣದ ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದೆ. ಹಾಗೇ ಜೊಂಪುಹತ್ತಿತೋ ಏನೋ, ಇದ್ದಕ್ಕಿದ್ದಂತೆಯೇ ಮರುಳುಸಿದ್ಧರು ದೇವಾಲಯದ ಮಹಾದ್ವಾರವನ್ನು ಪ್ರವೇಶಿಸಿ