ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಲ್ಯಾಣದಿಂದ ಕದಳಿ
೨೩೯


ಹೆಂಗಸೆಂಬ ಭಾವ ಬಯಲು ಬೆರೆಸಿತ್ತು.
ಕಲಿದೇವರ ದೇವಾ, ನಿಮ್ಮನೊಲಿಸಿ ಒಚ್ಚತವೋದ
ಮಹಾದೇವಿಯಕ್ಕನ ಪಾದವ ನೆನೆದು ನಾನು ಬದುಕಿದೆನು

ಕೊನೆಯ ಮಾತನ್ನು ಹೇಳುತ್ತಾ ಮತ್ತೊಮ್ಮೆ ಮಹಾದೇವಿಗೆ ನಮಸ್ಕರಿಸಿದ ಮಾಚಯ್ಯ. ಅವನೊಡನೆ ಶರಣರೆಲ್ಲ ಒಟ್ಟುಗೂಡಿದರು.

ಇದೆಲ್ಲವನ್ನೂ ಮೀರಿ ನಿಲ್ಲುವ ವಿನಯದ ಮೂರ್ತಿಯಾಗಿ ಮಹಾದೇವಿ ತಲೆ ಬಾಗಿದಳು ಮತ್ತು ಹೇಳಿದಳು :

``ನೀವು ಹೇಳಿದ ಮಾತುಗಳೆಲ್ಲಾ ನಿಮ್ಮನ್ನೇ ಕುರಿತು ನೀವು ಹೇಳಿಕೊಂಡವುಗಳೆಂದು ನಾನು ಭಾವಿಸುತ್ತೇನೆ ; ಏಕೆಂದರೆ :

ಸಂಗದಿಂದಲ್ಲದೆ ಅಗ್ನಿ ಹುಟ್ಟದು ;
ಸಂಗದಿಂದಲ್ಲದೆ ಬೀಜ ಮೊಳೆದೋರದು ;
ಸಂಗದಿಂದಲ್ಲದೆ ದೇಹವಾಗದು ;
ಸಂಗದಿಂದಲ್ಲದೆ ಸರ್ವಸುಖದೋರದು ;
ಚನ್ನಮಲ್ಲಿಕಾರ್ಜುನದೇವಯ್ಯ, ನಿನ್ನ ಶರಣರ
ಅನುಭವ ಸಂಗದಿಂದಲಾನು ಪರಮಸುಖಿಯಾಗಿ
ಬದುಕಿದೆನಯ್ಯಾ ಪ್ರಭುವೇ.

``ಶರಣರ ಸಂಗದಿಂದ ನನ್ನ ಮನ ಶುದ್ಧವಾಯಿತು. ಶರಣರ ಅನುಭವದಿಂದ ನನ್ನ ಪ್ರಾಣ ಶುದ್ಧವಾಯಿತು. ಶರಣರ ಪ್ರಸಾದದಿಂದ ನನ್ನ ಸರ್ವೇಂದ್ರಿಯಗಳು ಶುದ್ಧವಾದುವು. ಇಂತು ನೀವು ನನ್ನನ್ನು ಆಗುಮಾಡಿದಿರಿ. ಚನ್ನಮಲ್ಲಿಕಾರ್ಜುನನಿಗೆ ನನ್ನನ್ನು ತೊಡಿಗೆಯನ್ನಾಗಿ ಮಾಡಿದಿರಿ. ನೀವೆಲ್ಲರೂ ಹರಸಿ ನನ್ನನ್ನು ನಾಳೆ ಬೀಳ್ಕೊಡಬೇಕೆಂದು ಪ್ರಾರ್ಥಿಸುತ್ತೇನೆ ಎಂದವಳು ಪ್ರಭುದೇವನ ಕಡೆ ತಿರುಗಿ :

``ಪ್ರಭುವೇ, ಕದಳಿಯತ್ತ ನಡೆಯುವ ಮುಂದಿನ ಮಾರ್ಗವನ್ನು ನಿರೂಪಿಸಿ ಕಳುಹಿಸಿಕೊಡಬೇಕು ನನ್ನನ್ನು.

``ಮಹಾದೇವಿ, ಕೇಳು. ಅಲ್ಲಮ ಹೇಳಿದ ಗಂಭೀರ ಸ್ವರದಿಂದ :

``ಅದರ ವಿವರಗಳನ್ನೆಲ್ಲಾ ಆಗಲೇ ನಿನಗೆ ಹೇಳಿದ್ದೇನೆ. ಈಗ ನಾನು ಹೇಳುವ ಸಾಂಕೇತಿಕವಾದ ವಚನವನ್ನು ಕೇಳು... ಕದಳಿಯ ಬಹಿರಂಗ ಅಂತರಂಗಗಳೆರಡರ ಸಮನ್ವಯವನ್ನು ಇದು ಸಾಧಿಸಿದೆ.

ಶರಣರೆಲ್ಲರೂ ಕುತೂಹಲಗೊಂಡರು ಆ ವಚನವನ್ನು ಕೇಳಲು. ಹೊರ ಹೊಮ್ಮಿತು ಪ್ರಭುವಿನ ವಾಣಿ :