ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೪೦
ಕದಳಿಯ ಕರ್ಪೂರ


ನೀನಾನೆಂಬುಭಯಸಂಗವಳಿದು, ತಾನು ತಾನಾದ
ತ್ರಿಕೂಟವೆಂಬ ಮಹಾಗಿರಿಯ ತುಟ್ಟತುದಿಯ ಮೆಟ್ಟಿ ನೋಡಲು
ಬಟ್ಟಬಯಲು ಕಾಣಬಹುದು ನೋಡಾ !
ಆ ಬಯಲು ಬೆರಸುವರೆ ತ್ರಿಕೂಟಗಿರಿಯೊಳಗೊಂದು
ಕಾಣಬಾರದ ಕದಳಿಯುಂಟು ನೋಡಾ !
ಕದಳಿಯ ಕಳದಲ್ಲಿ ಒಳಹೊಕ್ಕು ನೋಡಲು
ತೊಳಗಿ ಬೆಳಗುವ ಜ್ಯೋತಿಯುಂಟು ಕೇಳಾ :
ನಡೆಯಲ್ಲಿಗೆ ತಾಯೆ ; ಗುಹೇಶ್ವರಲಿಂಗದಲ್ಲಿ
ಪರಮಪದವಿ ನಿನಗೆ ಸ್ವಯವಹುದು ನೋಡಾ :

ಮರುದಿನ ಬೆಳಗಿನ ವೇಳೆಗೆ ಮಹಾದೇವಿ ಹೊರಡಲು ಸಿದ್ಧವಾಗಿ ನಿಂತಿದ್ದಳು. ಶರಣರೆಲ್ಲಾ ನಾನಾ ಬಗೆಯಾಗಿ ಉಪಚರಿಸುತ್ತಿದ್ದರು.

ಗಂಗಾಂಬಿಕೆ ನೀಲಾಂಬಿಕೆಯರಿಗೆ ತಮ್ಮ ಮಗಳನ್ನು ಕಳುಹಿಸುವುದಕ್ಕಿಂತ ಹೆಚ್ಚಿನ ದುಃಖ ಉಕ್ಕಿಬರುತ್ತಿತ್ತು.

ಮಹಾದೇವಿಗೂ ಅವರನ್ನು ಅಗಲುವುದು ತಾಯಿಯನ್ನು ಆಗಲಿದಂತೆಯೇ ಅನ್ನಿಸುತ್ತಿತ್ತು. ಹಿಂದೆ ತಾನು ಉಡುತಡಿಯನ್ನು ಬಿಟ್ಟು ಕಲ್ಯಾಣದ ಕಡೆಗೆ ಹೊರಟ ಸನ್ನಿವೇಶವನ್ನು ನೆನಸಿಕೊಂಡಳು. ತಂದೆತಾಯಿಗಳು, ಗುರುಲಿಂಗ ದೇವರು, ದಾರಿಯಲ್ಲಿ ನೆರವಾದ ಸಂಗಮದೇವರು - ಎಲ್ಲರೂ ಅವಳ ಕಣ್ಣೆದುರು ಸುಳಿದರು. ತಾನಿಂದು ಬಹುದೂರ ಹೊರಟಿದ್ದೇನೆ. ಇನ್ನು ಅವರನ್ನು ಕಾಣುವುದು ಸಾಧ್ಯವಿಲ್ಲ ಎಂಬ ಭಾವ ಸುಳಿಯಿತು.

ಅಂದು ತಾನು ಕಲ್ಯಾಣದತ್ತ ಹೊರಟಾಗ, ಪೂರ್ಣತೆಯನ್ನು ಪಡೆಯಲು ಹೊರಟ ನದಿಯಂತೆ ಮನಸ್ಸು ಭೋರ್ಗಯುತ್ತಿತ್ತು. ಆದರೆ ಇಂದು ಅದು ಪೂರ್ಣತೆಯಿಂದ ಪೂರ್ಣತೆಯೆಡೆಗೆ ನಡೆಯುವ ಮಹಾಸಾಗರದಂತಿತ್ತು. ಆದರೂ ಮಾನವ ಸಹಜವಾದ ಮೇಲ್ಮಟ್ಟದಲ್ಲಿ ಆಗ ತೆರೆಗಳು ಕಾಣಿಸಿಕೊಳ್ಳುತ್ತಿದ್ದವು.

ಮಹಾದೇವಿ ಮನೆಯ ಹೊರಬಾಗಿಲಿನಿಂದ ಈಚೆಗೆ ಹೆಜ್ಜೆಯನ್ನು ಇಡುತ್ತಿದ್ದಂತೆಯೇ ಮಡಿವಾಳ ಮಾಚಯ್ಯ ಎದುರಿಗೆ ಬಂದು ದಿಂಡುಗೆಡೆದ. ಅನಂತರ ತಾನು ಹೊತ್ತುತಂದಿದ್ದ ನಡೆಮಡಿಯನ್ನು ಹಾಸಲು ತೊಡಗಿದ. ಮಹಾದೇವಿ ಅವಾಕ್ಕಾಗಿ ನಂತಳು.

ಅವಳ ವೈರಾಗ್ಯದ ಪ್ರಭೆಗೆ ದೃಷ್ಟಿಯಾಗದಿರಲೆಂಬಂತೆ ತೆಳುಕಾವಿಯ ಸೀರೆ, ಪವಿತ್ರತೆಯ ತೆರೆಯನ್ನು ನಿರ್ಮಿಸಿತ್ತು. ರುದ್ರಾಕ್ಷಿಯ ಸರ, ತ್ರಿಪುಂಡ್ರ