ಪುಟ:Kadaliya Karpoora.pdf/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣದಿಂದ ಕದಳಿ

೨೪೧

ಧಾರಣೆಗಳಿಂದ ಶೋಭಿಸುತ್ತಿದ್ದಳು. ಶರಣರೆಲ್ಲಾ ಆ ಪವಿತ್ರಮೂರ್ತಿಯನ್ನೇ ಎವೆಯಿಕ್ಕದೆ ನೋಡುತ್ತಿದ್ದರು.

ಗದ್ಗದ ಕಂಠದಿಂದ ಹೇಳಿದ ಮಾಚಯ್ಯ :

``ತಾಯಿ, ಮಹಾದೇವಿಯಕ್ಕ ! ಅಂದು ನೀವು ಕಲ್ಯಾಣಕ್ಕೆ ಬಂದ ದಿನ ನಾನು ನಡೆಮಡಿಯನ್ನು ಹಾಕಿದೆ ; ನೀವು ಅದನ್ನು ಮೈಗೆ ಹೊದೆದುಕೊಂಡು ಪವಿತ್ರವನ್ನಾಗಿ ಮಾಡಿದಿರಿ. ಇಂದು ಮತ್ತೆ ಅದನ್ನು ಹಾಸಿ ತಮ್ಮನ್ನು ಬೀಳ್ಕೊಡುವ ಸಂದರ್ಭದಲ್ಲಿ ಸೇರಿದ್ದೇವೆ.ಇಲ್ಲಿ ಮಾಚಯ್ಯನ ಕಂಠ ಸಂಪೂರ್ಣವಾಗಿ ನಿಂತುಹೋದಂತೆ ಕಾಣಿಸಿತು. ಮತ್ತೆ ಹೇಗೋ ಸಾವರಿಸಿಕೊಂಡು ಹೇಳಿದ : ``ಇಂದು ನಿಮ್ಮ ಪಾದಗಳ ಸ್ಪರ್ಶದಿಂದ ಪುನೀತನನ್ನಾಗಿ ಮಾಡಿ ಮುನ್ನಡೆಯಬೇಕು.

ಮಹಾದೇವಿ ಮಾಚಯ್ಯನ ನಿಷ್ಠೆಗೆ ನಿಬ್ಬೆರಗಾಗಿ ನಿಂತುನೋಡುತ್ತಿದ್ದಳು. ಶರಣರ ಕಣ್ಣುಗಳೆಲ್ಲಾ ಹನಿಯಾಡುತ್ತಿದ್ದವು.

ಶರಣೆಯರ ಗುಂಪಿನಿಂದ ಲಕ್ಕಮ್ಮ ತನ್ನ ಭಾವೋದ್ವೇಗವನ್ನು ತಡೆಯಲಾರದೆ ಮುಂದೆ ಬಂದು ಹೇಳಿದಳು ಮಾಚಯ್ಯನಿಗೆ :

``ಇಲ್ಲಿಯೇನೋ ನಡೆಮಡಿಯನ್ನು ಹಾಸಿ ಬೀಳ್ಕೊಡುತ್ತಿದ್ದೀರಿ ; ಆದರೆ ಎಷ್ಟು ದೂರ ಈ ನಡೆಮಡಿಯನ್ನು ನಾವು ಹಾಸಬಲ್ಲೆವು. ಮುಂದೆ ನಮ್ಮ ಅಕ್ಕ ಶ್ರೀಶೈಲದ ಕಠಿಣವಾದ ದಾರಿಯಲ್ಲಿ ಕಲ್ಲುಮುಳ್ಳುಗಳನ್ನು ತುಳಿದು ಸಾಗುವಾಗ ನಡೆಮಡಿಯನ್ನು ಹಾಸುವವರು ಯಾರು ?

ಗದ್ಗದ ಕಂಠದಿಂದ ಮುಂದೆ ಮಾತನಾಡಲಾರದವಳಾದಳು ಲಕ್ಕಮ್ಮ. ಅವಳ ಮಾತು ಶರಣರೆಲ್ಲರನ್ನು ಮುಟ್ಟಿತು. ದುಃಖತಪ್ತರನ್ನಾಗಿ ಮಾಡಿತು.

ಈಗ ಪ್ರಭುದೇವನೇ ಮುಂದೆ ಬರಬೇಕಾಯಿತು :

``ಅಲ್ಲಿ ಚೆನ್ನಮಲ್ಲಿಕಾರ್ಜುನನೇ ನಡೆಮಡಿಯನ್ನು ಹಾಸುತ್ತಾನೆ. ಲಕ್ಕಮ್ಮ ಸಂಸಾರದ ಲೀಲೆಯನ್ನು ದೂರ ನಿಂತು ನೋಡಬಲ್ಲ ನೀವೇ ಹೀಗೆ ವರ್ತಿಸಿದರೆ ಹೇಗೆ ? ಸಹಿಸಿಕೊಳ್ಳಿ. ಮಹಾದೇವಿ ನಮಗೆ ಮಾರ್ಗದರ್ಶಕಳಾಗಿ ನಡೆಯುತ್ತಿದ್ದಾಳೆ. ಅವಳು ಮುಂದೆ, ನಾವು ಹಿಂದೆ. ಅವಳು ಎಲ್ಲ ದೃಷ್ಟಿಯಿಂದಲೂ ಅಕ್ಕ ಎಂದು ಒಪ್ಪಿಕೊಂಡಿದ್ದೀರಿ. ಈ ಪಯಣದಲ್ಲಿಯೂ ಆಕೆ ನಮಗೆ ಅಕ್ಕ" ಎಂದು ಅಲ್ಲಮಪ್ರಭು ಮಹಾದೇವಿಯತ್ತ ತಿರುಗಿ :

``ತಾಯಿ ಮಹಾದೇವಿ, ಈ ನಿಷ್ಠಾವಂತ ಭಕ್ತನ ಕೊನೆಯ ಬಯಕೆಯನ್ನು ಈಡೇರಿಸು. ಈ ನಡೆಮಡಿಯ ಮೇಲೆ ನಡೆ, ತಾಯಿ.