ಮಹಾದೇವಿ ಬಾಗಿ ಅದನ್ನು ಕಣ್ಣಿಗೆ ಒತ್ತಿಕೊಂಡಳು. ಪ್ರಭುವಿನ ಕೋರಿಕೆಯಂತೆ ನಡೆಯತೊಡಗಿದಳು. ಮಾಚಯ್ಯ ಧನ್ಯತೆಯನ್ನು ಪಡೆದವನಂತೆ ಮುಂದೆ ಮುಂದೆ ನಡೆಮಡಿಯನ್ನು ಹಾಸಿಕೊಂಡು ಹೋಗುತ್ತಿದ್ದ. ಮಹಾಮನೆಯ ಮಹಾದ್ವಾರದವರೆಗೂ ಬಂದರು :
“ನಿನ್ನ ನಿಷ್ಠೆಯ ಭಕ್ತಿಸೇವೆ ಇಲ್ಲಿಗೆ ಸಾಕು, ಮಾಚಿ ತಂದೆ” ಎಂದು ಮಹಾದೇವಿ ಶರಣರೆಲ್ಲರತ್ತ ದೃಷ್ಟಿಯನ್ನು ಹರಿಸಿದಳು.
ಅಷ್ಟರಲ್ಲಿ ಹರಳಯ್ಯ ಆತುರವಾಗಿ ಓಡಿಬಂದು ಮಹಾದೇವಿಗೆ ನಮಸ್ಕರಿಸಿದ. ಬಟ್ಟೆಯಲ್ಲಿ ಸುತ್ತಿ ತಂದಿದ್ದ ಪಾದರಕ್ಷೆಗಳನ್ನು ಹೊರತೆಗೆದು ಮಹಾದೇವಿಯ ಮುಂದಿಟ್ಟು ಬೇಡಿಕೊಂಡ :
“ರಾತ್ರಿಯೆಲ್ಲಾ ಕುಳಿತು ಇವುಗಳನ್ನು ತಮಗಾಗಿ ಸಿದ್ಧಗೊಳಿಸಿದ್ದೇನೆ. ಇವುಗಳನ್ನು ಧರಿಸಿ ನನ್ನನ್ನು ಉದ್ಧರಿಸಬೇಕು, ತಾಯಿ.”
ಪ್ರಭುದೇವನ ಸೂಚನೆಯಂತೆ ಮಹಾದೇವಿ ಅವುಗಳನ್ನು ಧರಿಸಿದಳು. ಧನ್ಯತೆಯಿಂದ ಹರಳಯ್ಯ ಆನಂದಬಾಷ್ಪಗಳನ್ನು ಸುರಿಸಿದ.
ಮಹಾದೇವಿ ಮುಂದುವರಿಯಲು ಉದ್ಯುಕ್ತಳಾದಳು. ಶರಣರ ಜೀವನ ಉಂಟುಮಾಡಿದ ಒಟ್ಟು ಪರಿಣಾಮವನ್ನು ನೆನಸಿಕೊಂಡು ಹೇಳಿದಳು ಈ ವಚನವನ್ನು :
ಅಯ್ಯಾ ನಿಮ್ಮ ಅನುಭಾವಿಗಳ ಸಂಗದಿಂದ ಎನ್ನ ತನು ಶುದ್ಧವಾಯಿತ್ತು.
ಅಯ್ಯಾ ನಿಮ್ಮ ಅನುಭಾವಿಗಳು ಎನ್ನ ಒರೆದೊರೆದು
ಕಡಿಕಡಿದು, ಅರೆದರೆದು, ಅನುಮಾಡಿದ ಕಾರಣ
ಎನ್ನ ಮನ ಶುದ್ಧವಾಯಿತ್ತು....
ನಿಮ್ಮ ಶರಣರಿಂತು ಎನ್ನನಾಗುಮಾಡಿದ ಕಾರಣ
ಚನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣರಿಗೆ.
ತೊಡಿಗೆಯಾದೆನಯ್ಯಾ ಪ್ರಭುವೇ.
“ಆದುದರಿಂದ ಇಂದು ನನ್ನನ್ನು ಕಳುಹಿಸಿಕೊಡಿ. ನಾನಿನ್ನು ಬರುತ್ತೇನೆ” ಎಂದು ಮುಂದೆ ನಡೆದಳು ಮಹಾದೇವಿ. ಆದರೆ ಶರಣರು ಹಿಂದೆ ಉಳಿಯುವಂತೆ ತೋರಲಿಲ್ಲ. ಕಲ್ಯಾಣಪಟ್ಟಣದ ಪ್ರಮುಖ ಬೀದಿಯಲ್ಲಿರುವವರೆಗೆ ಈ ಪುಣ್ಯ ಮಂಗಳ ಮೆರವಣಿಗೆಯನ್ನು ನೋಡುವ ಮಹಾಭಾಗ್ಯ ಲಭಿಸಿತು.