ಪುಟ:Kadaliya Karpoora.pdf/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣದಿಂದ ಕದಳಿ

೨೪೩

ಪಟ್ಟಣದ ಕೋಟೆಯನ್ನು ದಾಟಿ ಹೊರಗೆ ಬಂದಳು ಮಹಾದೇವಿ. ಎಲ್ಲರೂ ಅವಳನ್ನು ಹಿಂಬಾಲಿಸಿಯೇ ಬಂದಿದ್ದರು. ಪವಿತ್ರಶಕ್ತಿಯನ್ನು ಹಿಂಬಾಲಿಸುವ ಪುಣ್ಯ ಮೂರ್ತಿಗಳಂತೆ. ಮಹಾದೇವಿ ಅಲ್ಲಿ ನಿಂತಳು. ಶರಣರನ್ನೆಲ್ಲಾ ನೋಡಿದಳು. ಹೇಳಬೇಕಾದುದನ್ನೆಲ್ಲಾ ಆಗಲೇ ಹೇಳಿಯಾಗಿತ್ತು. ಕೇಳಬೇಕಾದುದನ್ನು ಕೇಳಿಯಾಗಿತ್ತು. ಒಬ್ಬೊಬ್ಬರ ಮೇಲೂ ಅವಳ ದೃಷ್ಟಿ ಸುಳಿಯಿತು. ಎಲ್ಲರೂ ಮಂತ್ರಮುಗ್ಧರಂತೆ ಅವಳನ್ನೇ ನೋಡುತ್ತಿದ್ದರು.

ಶರಣೆಯರ ಕಡೆಗೆ ದೃಷ್ಟಿಯನ್ನು ಹರಿಸಿದಳು. ಅಲ್ಲಿ ಕೆಲವರ ಕಣ್ಣುಗಳಿಂದ ಧಾರಾಕರವಾಗಿ ನೀರು ಸುರಿಯುತ್ತಿತ್ತು. ಕೆಲವರು ಬಿಕ್ಕಳಿಸುತ್ತಿದ್ದರು. ಅದಕ್ಕೆ ಮೀರಿದ ಭಾವನೆಯಿಂದ ನಿಂತಿದ್ದರು - ಗಂಗಾಂಬಿಕೆ, ನೀಲಾಂಬಿಕೆ. ಮಾತಿಗೆ ಮೀರಿದ ಭಾವನೆಯನ್ನು ಆ ಒಂದು ನೋಟವೇ ಸಾರಿಹೇಳುವಂತಿತ್ತು.

ಬಸವಣ್ಣನತ್ತ ಮಹಾದೇವಿಯ ದೃಷ್ಟಿ ತಿರುಗಿತ್ತು. ಆತನೂ ಸಜಲ ನಯನವಾಗಿ ನಿಟ್ಟಿಸುತ್ತಿದ್ದ ಮಹಾದೇವಿಯನ್ನು. ಸಿದ್ಧರಾಮ, ಚನ್ನಬಸವರ ದುಃಖವನ್ನು ಅವರ ಮುಖಭಾವ ಅಡಗಿಸಿಕೊಳ್ಳಲಾರದೇ ಹೋಗಿತ್ತು. ಪಕ್ಕದಲ್ಲಿ ನಿಂತು ಅಲ್ಲಮ ಪ್ರಭುದೇವ ಇದೆಲ್ಲವನ್ನೂ ಸಾಕ್ಷೀಭೂತವಾಗಿ ನೋಡುತ್ತಿದ್ದರೂ ತಾನೂ ಅದಕ್ಕೆ ಒಳಗಾದಂತೆ ತೋರುತ್ತಿತ್ತು. ಅವರೆಲ್ಲರನ್ನೂ ಒಟ್ಟಿಗೆ ತನ್ನ ದೃಷ್ಟಿಯಲ್ಲಿ ತುಂಬಿಕೊಂಡ ಮಹಾದೇವಿ ಹೇಳಿದಳು :

“ಇನ್ನು ನೀವು ಇಲ್ಲಿ ನಿಲ್ಲಿರಿ. ನಿಮ್ಮೆಲ್ಲರಿಗೂ ಶರಣು ಶರಣಾರ್ಥಿ” ಎಂದು ಕೈಗಳನ್ನೆತ್ತಿ ಜೋಡಿಸುತ್ತಿರುವಂತೆಯೇ ಮಹಾದೇವಿಯ ಮೈಯಲ್ಲಿ ಮಿಂಚಿನ ಶಕ್ತಿ ಸಂಚಾರವಾದಂತಾಯಿತು. ಗಂಭೀರವಾದ ಧ್ವನಿಯಿಂದ ಹೇಳತೊಡಗಿದಳು:

ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ ;

ಬೆಳೆದನು ಅಸಂಖ್ಯಾತರ ಕರುಣದೊಳಗೆ.

ಭಾವವೆಂಬ ಹಾಲು, ಸುಜ್ಞಾನವೆಂಬ ತುಪ್ಪ,

ಪರಮಾರ್ಥವೆಂಬ ಸಕ್ಕರೆಯನ್ನಿಕ್ಕಿದರು ನೋಡಾ !

ಇಂತಪ್ಪ ತ್ರಿವಿಧಾಮೃತವನು ದಣಿಯಲೆರೆದು ಸಲಹಿದರೆನ್ನ.

ವಿವಾಹ ಮಾಡಿದಿರಿ, ಸಯವಪ್ಪ ಗಂಡಂಗೆ ಕೊಟ್ಟಿರಿ.

ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ. ಬಸವಣ್ಣ ಮೆಚ್ಚಲೊಗೆತನ ಮಾಡುವೆ.