ಪುಟ:Kadaliya Karpoora.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪

ಕದಳಿಯ ಕರ್ಪೂರ

ಒಳಗೆ ಬರುತ್ತಿರುವುದು ಕಾಣಿಸಿತು. ಅನಿರೀಕ್ಷಿತವಾದ ಅವರ ಆಗಮನದಿಂದ ಆಶ್ಚರ್ಯಗೊಂಡು ಸ್ವಾಗತಿಸುತ್ತಿರುವಷ್ಟರಲ್ಲಿ, ಅವರೇ ಒಳಗೆ ಅಂದು ಕುಳಿತುಕೊಳ್ಳುತ್ತಾ ಹೇಳಿದರು:

‘ಶ್ರೀಶೈಲಕ್ಷೇತ್ರ ದರ್ಶನವೆಲ್ಲಾ ಆದಂತಾಯಿತಲ್ಲವೇ?’

‘ಹೌದು ಸ್ವಾಮಿ, ಆದರೆ ತಾವು ಇಲ್ಲಿಗೆ ಬಂದುದು....’

‘ನಮ್ಮದೇನು?.... ಹೀಗೇ ನಡೆದಿರುತ್ತದೆ.... ಈಗ ಇಲ್ಲಿಗೆ ಬಂದುದೇಕೆ ಎಂಬುದು ಗೊತ್ತೇ?’ ಅರಿಯೆನೆಂಬಂತೆ ತಲೆಯಾಡಿಸಿದೆ. ಅವರೇ ಮತ್ತೆ ಹೇಳತೊಡಗಿದರು:

‘ಅಂದು ನಾನು ದೀಕ್ಷೆಯನ್ನಿತ್ತ ಶಿಶು ಮಹಾದೇವಿ....’

‘ಹೌದು.... ಆ ಪುಣ್ಯದ ಪ್ರಭಾವದಿಂದ ಆಕೆ ಪ್ರವರ್ಧಮಾನಳಾಗುತ್ತಿದ್ದಾಳೆ.’ ನಾನು ಹೇಳಿದೆ.

‘ಈಗ ಆಕೆಗೆ ಜ್ಞಾನದೀಕ್ಷೆಯಾಗಬೇಕು. ಮಲ್ಲಿಕಾರ್ಜುನನ ಅರುಹಿನ ಕುರುಹನ್ನು ಅವಳ ಕರಸ್ಥಲಕ್ಕೆ ಕೊಡಿ. ಅವಳನ್ನು ಶರಣ ಸತಿಯನ್ನಾಗಿ ಮಾಡಿರಿ. ಮಲ್ಲಿಕಾರ್ಜುನನಿಗೆ ಮಾತ್ರ ಮೀಸಲಾದ ಆಧ್ಯಾತ್ಮಿಕ ವಧು, ಆ ಮಹಾದೇವಿ.... ಏಳಿರಿ.... ನೀವು ಹೋದೊಡನೆಯೇ ಆ ಕರ್ತವ್ಯವನ್ನು ನಿರ್ವಹಿಸಬೇಕು. ಇನ್ನೊಂದು ಮಾತು. ಬಸವಣ್ಣನ ಕಲ್ಯಾಣ ಪಟ್ಟಣದ ಮೂಲಕ ಉಡುತಡಿಯನ್ನು ಸೇರಿರಿ. ಕಲ್ಯಾಣದಲ್ಲಿ ನೀವು ಕಾಣುವ ಶರಣಮಾರ್ಗದ ರಹಸ್ಯವನ್ನು ಮಹಾದೇವಿಗೂ ನಿರೂಪಿಸಿರಿ.’

ಈ ಮಾತುಗಳನ್ನು ಅರಗಿಸಿಕೊಂಡು ನಾನೇನನ್ನೋ ಕೇಳಬೇಕೆನ್ನುತ್ತಿರು ವಷ್ಟರಲ್ಲಿ, ಹಾಗಾದರೆ ನಾನು ಬರುತ್ತೇನೆ.... ಮರೆಯಬೇಡಿ....’ ಎಂದು ಹೇಳುತ್ತಾ ಎದ್ದು ಮಲ್ಲಿಕಾರ್ಜುನನ ಗರ್ಭಗೃಹದತ್ತ ನಡೆಯತೊಡಗಿದರು, ಗರ್ಭಗೃಹವನ್ನು ಹೋಗುತ್ತಿದ್ದಂತೆಯೇ ಅವರ ದಿವ್ಯವಿಗ್ರಹ ಕರಗಿ ಮರೆಯಾದಂತಾಯಿತು. ತಟಕ್ಕನೆ ಕಣ್ಣುಬಿಟ್ಟೆ, ಕಂಡುದು ಕನಸಲ್ಲ; ಕನಸಿನಾಚೆಯ ದಿವ್ಯ ಮನಸ್ಸಿನ ನುಡಿ ಎಂದೆನಿಸಿ ಮೈ ಪುಳಕಿತವಾಯಿತು. ಅದಾದ ಒಂದೆರಡು ದಿನಗಳಲ್ಲೇ ಶ್ರೀಶೈಲವನ್ನು ಬಿಟ್ಟೆ.

“ಗುರುಗಳ ಮಾತಿನಂತೆ ಕಲ್ಯಾಣಕ್ಕೆ ಹೋಗಿ, ಅಲ್ಲಿ ಕೆಲವು ದಿನಗಳಿದ್ದು ಇಲ್ಲಿಗೆ ಬಂದಿದ್ದೇನೆ. ಅವರು ಕಲ್ಯಾಣದತ್ತ ನನ್ನನ್ನು ಏಕೆ ನಿರ್ದೇಶಿಸಿದರೆಂಬುದು ಅಲ್ಲಿಗೆ ಕಾಲಿಟ್ಟ ಕ್ಷಣದಿಂದಲೇ ಅನುಭವಕ್ಕೆ ಬರತೊಡಗಿತು. ಅದನ್ನು ಹೇಳುವುದಕ್ಕೆ ಈಗ ನಾನು ತೊಡಗುವುದಿಲ್ಲ. ಅಂತೂ ಮಹಾದೇವಿ ಕಾರಣಿಕ ಕನ್ಯೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡಿರು.”