ಪುಟ:Kadaliya Karpoora.pdf/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣದಿಂದ ಕದಳಿ

೨೪೯

ಬಹಿರಂಗದಲ್ಲಿಯೂ ಪ್ರಕಾಶಿಸಿದಂತಾಯಿತು. ಆ ಆನಂದದಲ್ಲಿಯೇ ತಲ್ಲೀನಳಾಗಿ ಮೈಮರೆತು ಕುಳಿತಿದ್ದಳು.

ಅಲ್ಲಿ ಸೇರಿದ್ದವರೆಲ್ಲರೂ ಅವಳ ಈ ಅಲೌಕಿಕವಾದ ಆನಂದದ ಅನುಭವದಲ್ಲಿ ಭಾಗಿಗಳಾದರು. ದೇವಾಲಯದಿಂದ ಹೊರಟ ಜಯಘೋಷಗಳು, ಭಜನೆಗಳು, ಸುತ್ತಲ ಪರ್ವತ ಪ್ರಾಂತಗಳಲ್ಲಿ ಪ್ರತಿಧ್ವನಿಸಿದುವು. ಕ್ರಮೇಣ ಎಚ್ಚತ್ತುಕೊಂಡ ಮಹಾದೇವಿ ತಾನೂ ಆ ಭಜನೆಯ ಪರಮಾನಂದರಸದಲ್ಲಿ ಭಾಗಿಯಾದಳು.

ರಾತ್ರಿ ಕಳೆದು ಬೆಳಗಾಗುತ್ತಿತ್ತು. ಮಹಾದೇವಿ ಬಹಳ ಮುಂಚೆಯೇ ಎದ್ದು ಮಲ್ಲಿಕಾರ್ಜುನನ ದೇವಾಲಯದ ಎದುರಿನಲ್ಲಿ ಬಂದು ನಿಂತಿದ್ದಳು. ದೇವಾಲಯದ ಸುತ್ತ ಅವನ ಸಾನಿಧ್ಯದ ಸೇವೆಯನ್ನು ಮಾಡುತ್ತಿರುವ ಪ್ರಕೃತಿ ಸೌಂದರ್ಯ, ಮಹಾದೇವಿಯನ್ನು ಸ್ವಾಗತಿಸಲು ಕಾತರಗೊಂಡು ಕಾದು ನಿಂತಿತ್ತು.

ಸೂರ್ಯ ಇನ್ನೂ ಮೂಡಿಬಂದಿರಲಿಲ್ಲ. ಚೇತನದ ಚಿಲುಮೆಯೇ ಉಕ್ಕಿಬರುತ್ತಿರುವಂತೆ ಮೂಡಣದಿಗಂತದಲ್ಲಿ ಅರುಣೋದಯದ ಛಾಯೆ, ಮಂಗಳದ ಓಕುಳಿಯನ್ನು ನಿವಾಳಿಸಿ ಚೆಲ್ಲಿದಂತೆ ಕಾಣಿಸುತ್ತಿತ್ತು. ಸುತ್ತಲೂ ತಲೆಯೆತ್ತಿ ನಿಂತ ಪರ್ವತಶ್ರೇಣಿಗಳು, ಧ್ಯಾನಸ್ಥನಾದ ಯೋಗಿರಾಜ ಮಹಾದೇವನ ಪರಿವಾರವೆಂಬಂತೆ ಮೌನತಪದಿಂದ ನಿಂತು ನಿರೀಕ್ಷಿಸುತ್ತಿದ್ದುವು.

ಮಲ್ಲಿಕಾರ್ಜುನ ದೇವಾಲಯದ ಸ್ಪಷ್ಟವಾದ ನೋಟ, ಈಗ ಭವ್ಯವಾಗಿ ಗೋಚರಿಸುತ್ತಿತ್ತು. ಮಹಾದ್ವಾರದ ಮಹಾಗೋಪುರ, ಪರ್ವತಗಳೊಡನೆ ಸ್ಪರ್ಧೆ ಹೂಡುವಂತೆ ತಲೆಯೆತ್ತಿ ನಿಂತಿತ್ತು. ಗರ್ಭಗೃಹದ ಮೇಲೆ ನಾಲ್ಕು ದಿಕ್ಕಿಗೂ ಇರುವ ನಾಲ್ಕು ಗೋಪುರಗಳು, ಅವೆಲ್ಲದರ ಮೇಲೆ ತುಟ್ಟತುದಿಯಲ್ಲಿ ನಿಂತ ಚಿನ್ನದ ಕಳಶ. ಸೂರ್ಯನು ಪರ್ವತದ ತಲೆಯನ್ನೇರಿ ಬಂದು ಕಾಣಿಸಿಕೊಳ್ಳುವುದಕ್ಕೆ ಮೊದಲೇ ಅವನ ಮೀಸಲು ಕಿರಣಗಳು ಬಂದು ಈ ಹೊನ್ನ ಕಳಶವನ್ನು ಮುತ್ತಿಟ್ಟು, ಅದರ ಮೂಲಕ ಮಲ್ಲಿಕಾರ್ಜುನನ ಪಾದಗಳಿಗೆ ಪ್ರಣಾಮಗಳನ್ನು ಒಪ್ಪಿಸುವಂತೆ ತೋರುತ್ತಿತ್ತು.

ಅನೇಕ ಬಗೆಯ ಹಕ್ಕಿಗಳ ಕಲಕಲರವ ಮಲ್ಲಿಕಾರ್ಜುನನಿಗೆ ಪ್ರಕೃತಿದೇವಿಯು ಒಪ್ಪಿಸುವ ಉದಯರಾಗದಂತೆ ಮಂಜುಳವಾಗಿತ್ತು. ಮಹಾದೇವಿಯು ತಾನೂ ಪ್ರಕೃತಿಯ ಒಂದು ಅಂಗದಂತಾಗಿ ನಿಂತು ನೋಡುತ್ತಿದ್ದಳು ಈ ದೃಶ್ಯ ಸೌಂದರ್ಯವನ್ನು.

ಅಷ್ಟರಲ್ಲಿ ಪರಿಷೆಯ ನಾಯಕ ಬಳಿಗೆ ಬರುತ್ತಾ ಕೇಳಿದ :

“ಪಾತಾಳಗಂಗೆಗೆ ಬರುವುದಿಲ್ಲವೇ, ತಾಯಿ?”