ಎಂದು ಹೇಳುತ್ತಿದ್ದಂತೆಯೇ ಶಿವ ಸರ್ವಭರಿತನಾಗಿ ಮುಖ ದೋರುತ್ತಿರುವಂತೆ ತೋರಿತು. ಪೂಜಾರಸದಲ್ಲಿ ಮಗ್ನಳಾಗಿ ತನ್ನನ್ನು ತಾನು ಮರೆತಳು. ಧ್ಯಾನದಿಂದ ಬಹಿರ್ಮುಖಳಾಗಬೇಕಾದರೆ ಅವಳು ಉಟ್ಟ ಒದ್ದೆ ಬಟ್ಟೆ ತಾನಾಗಿಯೇ ಒಣಗಿ ಹೋಗಿತ್ತು.
ಮೇಲೆದ್ದು ಪಾತಾಳಗಂಗೆಯನ್ನು ಏರತೊಡಗಿದಳು. ಅದನ್ನು ಏರುವಾಗ ದೇಹಕ್ಕೆ ಆಗಬಹುದಾದ ಶ್ರಮವೆಲ್ಲಾ ಸುತ್ತಲಿನ ವಾತಾವರಣದ ಶ್ರೀಮಂತ ಸನ್ನಿವೇಶದಿಂದ ಸಂತೋಷದಾಯಕವೇ ಆಗಿ ಪರಿಣಮಿಸುತ್ತಿತ್ತು.
ಆ ದಿನವೆಲ್ಲಾ ಉಪವಾಸ, ರಾತ್ರಿಯೆಲ್ಲಾ ಜಾಗರಣೆ, ದೇವಾಲಯದ ಸುತ್ತಲೂ ತಂಡತಂಡವಾದ ಭಜನೆಗಳ ಗುಂಪುಗಳು, ಶಿವನಾಮಘೋಷಣೆಗಳನ್ನು ಆಗಸಕ್ಕೇರಿಸುತ್ತಿದ್ದವು. ಮಹಾದೇವಿಯೂ ಅಂದು ಬೆಳಗಿನವರೆಗೂ ಶಿವಮಂತ್ರಘೋಷದ ಅಲೆಯಲ್ಲಿ ತೇಲುತ್ತಾ ಜಾಗರಣೆ ಮಾಡಿದಳು.
ಬೆಳಗ್ಗೆ ಮತ್ತೆ ಪಾತಾಳಗಂಗೆಗೆ ಹೋಗಿ ಸ್ನಾನಪೂಜಾದಿ ವಿಧಿಗಳನ್ನು ಮುಗಿಸಿಕೊಂಡು ಮೇಲೆ ಬರುವ ವೇಳೆಗೆ ನಾಲ್ಕಾರು ಕಡೆಗಳಲ್ಲಿ ದಾಸೋಹದ ಸಂತರ್ಪಣೆಯ ಏರ್ಪಾಡು ನಡೆಯುತ್ತಿತ್ತು. ಪ್ರಸಾದವನ್ನು ಸ್ವೀಕರಿಸಿದಳು ಮಹಾದೇವಿ. ಅನಂತರ ಸಂಜೆಯವರೆಗೂ ವಿಶ್ರಾಂತಿ.
ಸಂಜೆ ಯಾತ್ರಾರ್ಥಿಗಳೆಲ್ಲಾ ಸುತ್ತಮುತ್ತಲಿನ ಪ್ರದೇಶಗಳನ್ನು ಹೋಗಿ ನೋಡಿ ಬಂದರು.
ಮರುದಿನ ಬೆಳಗ್ಗೆ ಎಲ್ಲರೂ ಹೊರಟು ನಿಂತರು ಶ್ರೀಶೈಲದಿಂದ. ಮಹಾದೇವಿ ಹೊರಡುವ ಸೂಚನೆಗಳನ್ನು ತೋರಿಸದಿದ್ದುದನ್ನು ಕಂಡ ಪರಿಷೆಯ ನಾಯಕ ಬಳಿಗೆ ಬಂದು ಹೊರಡಲು ಹೊತ್ತಾಯಿತೆಂದು ಸೂಚಿಸಿದ.
ಆದರೆ ಮಹಾದೇವಿ ಹೇಳಿದಳು :
“ಇಲ್ಲ, ಸ್ವಾಮಿ, ನಾನು ಮತ್ತೆ ಹಿಂದಿರುಗಿ ಹೋಗುವುದಕ್ಕಾಗಿ ಶ್ರೀಶೈಲಕ್ಕೆ ಬಂದವಳಲ್ಲ. ಈ ಮಲ್ಲಿಕಾರ್ಜುನನ ಸನ್ನಿಧಿಯೇ ನನ್ನ ಉಳಿದ ಜೀವನದ ಅವಲಂಬನೆ.”
ಈ ಮಾತನ್ನು ಕೇಳಿ ಆತ ಅವಾಕ್ಕಾಗಿ ನಿಂತ. ಕೇಳಿದವರೆಲ್ಲರೂ ಚಕಿತರಾಗಿ ಮೂಕಗೌರವದಿಂದ ತಲೆಬಾಗಿದರು. ಅವಳ ಸಾಹಸವನ್ನು ತಪ್ಪಿಸಲು ಯತ್ನಿಸಿದರು. ಎಲ್ಲವೂ ವಿಫಲವಾಯಿತು. ನಿರ್ವಾಹವಿಲ್ಲದೆ ಪರಿಷೆ ಅವಳನ್ನು ಬಿಟ್ಟು ಹೊರಡಬೇಕಾಯಿತು.