ಇನ್ನೊಂದು ದಿನ ಮಹಾದೇವಿ ಅರ್ಕೇಶ್ವರನ ಬಳಿಗೆ ಹೋದಳು. ಅರ್ಕೇಶ್ವರನ ಮುಂದೆ ಅತಿ ಸುಂದರವಾದ ಒಂದು ತಿಳಿನೀರಿನ ಕೊಳ. ದಡದ ಮೇಲಿರುವ ಮರಗಳಿಂದ ಉದುರಿದ ಹೂವುಗಳು ನೀಲಿಯ ಆಕಾಶದಲ್ಲಿರುವ ನಕ್ಷತ್ರಗಳಂತೆ ನೀರಿನ ಮೇಲೆ ತೇಲುತ್ತಿದ್ದವು.
ದೇವಾಲಯದ ಹಿಂಭಾಗದಲ್ಲಿ ಪರ್ವತ, ಇಳಿಯಲು ತೊಡಗಿ ಒಂದು ಚಿಕ್ಕ ಕಣಿವೆಯಾಗಿತ್ತು. ಕಲ್ಲಿನಿಂದ ಇದ್ದಕ್ಕಿದ್ದಂತೆಯೇ ವ್ಯಕ್ತವಾಗಿ ಐದು ಕಡೆಗಳಲ್ಲಿ ನೀರಿನ ಸೆಲೆ ಉಕ್ಕಿಹರಿಯುತ್ತಿತ್ತು. ಶಿವನ ಕರುಣೆಯ ಅಮೃತಾಂಬುವಿನಂತೆ ಉಕ್ಕಿಹರಿಯುತ್ತಿರುವ ಈ ಪಂಚಧಾರೆಗಳ ರಹಸ್ಯವನ್ನು ಅರಿತು ಸೇವಿಸಿದರೆ ಮರಣವಿಲ್ಲೆಂಬ ಗುರುಗಳ ಮಾತನ್ನು ನೆನೆದಳು.
ಪಂಚಧಾರೆಗಳೆಲ್ಲವೂ ಮುಂದೆ ಒಂದಾಗಿ ಸೇರಿ ಹರಿದು ಆ ಕಣಿವೆಯ ವೃಕ್ಷಸಂತತಿಗೆ ಜೀವದಾನ ಮಾಡುವಂತೆ ಮುಂದೆ ಸುರಿಯುತ್ತಿದ್ದವು.
ದಟ್ಟ ಹಸುರಿನಿಂದ ಕೂಡಿರುವ ಈ ಸಣ್ಣ ಕಣಿವೆಯ ಪ್ರಕೃತಿ ಸೌಂದರ್ಯ ತುಂಬಾ ಮನೋಹರವಾಗಿತ್ತು. ಶ್ರೀಶೈಲದಲ್ಲಿರುವ ಎಲ್ಲ ಬಗೆಯ ಹಕ್ಕಿಗಳಿಗೂ ಇದು ಆವಾಸ ಸ್ಥಾನವಾಗಿದೆಯೆಂಬಂತೆ ಅವುಗಳ ಕೂಜನದಿಂದ ಕೋಲಾಹಲಮಯವಾಗಿತ್ತು. ರುದ್ರಗಮ್ಮರಿಯಲ್ಲಿ ಪ್ರಕೃತಿಭೈರವಿಯ ಭಯಂಕರ ಮುಖವನ್ನು ಕಂಡ ಮಹಾದೇವಿ; ಇಲ್ಲಿ ಅದರ ಇನ್ನೊಂದು ಮುಖವನ್ನು ಕಂಡಳು. ಸಿರಿಹಸುರಿನಿಂದ ಕೂಡಿದ ಪ್ರಕೃತಿ ಶಂಕರಿಯ ಈ ಮುಖ ಮನೋಹರವಾಗಿ ಕಾಣಿಸಿತು ಮಹಾದೇವಿಗೆ.
ಹೀಗೆ ನಾಲ್ಕಾರು ದಿನಗಳು ಶ್ರೀಶೈಲದಲ್ಲಿ ಕಳೆದವು. ನಿತ್ಯವೂ ಪಾತಾಳ ಗಂಗೆಯಲ್ಲಿ ಸ್ನಾನ, ಪೂಜೆ ; ಒಂದೊಂದು ದಿನ ಒಂದೊಂದು ಶಿಖರವನ್ನೋ, ತೀರ್ಥವನ್ನೋ ನೋಡಿಬರುವುದು ; ಮಲ್ಲಿಕಾರ್ಜುನನ ಸಾನಿಧ್ಯದಲ್ಲಿ ತನ್ನ ಆನಂದಾನುಭವದ ವಚನಗಾಯನ ; ಹೀಗೆ ಸಾಗಿತ್ತು.
ಅಂದು ಮಹಾದೇವಿ ಮಲ್ಲಿಕಾರ್ಜುನನ ಮುಂದೆ ಕುಳಿತು ಹಾಡುತ್ತಿರುವುದನ್ನು ಪ್ರಧಾನ ಅರ್ಚಕ ಕೇಳಿದ :
ಹೊಳೆವ ಕೆಂಜೆಡೆಗಳ, ಮಣಿಮಕುಟದ
ಒಪ್ಪುವ ಸುಲಿವಲ್ಲ ನಗೆಮೊಗದ,
ಕಂಗಳ ಕಾಂತಿಯಿಂ ಈರೇಳು ಭುವನಮಂ ಬೆಳಗುವ
ದಿವ್ಯ ಸ್ವರೂಪವನು ಕಂಡೆ ನಾನು.
ಕಂಡೆನ್ನ ಕಂಗಳ ಬರ ಹಿಂಗಿತ್ತಿಂದು.