ಗಂಡಗಂಡರನೆಲ್ಲ ಹೆಂಡಹೆಂಡಿರಾಗಿ
ಆಳುವ ಗರುವನ ಕಂಡೆ ನಾನು.
ಜಗದಾದಿ ಶಕ್ತಿಯೊಳು ಬೆರಸಿ ಒಡನಾಡುವ
ಪರಮಗುರು ಚನ್ನಮಲ್ಲಿಕಾರ್ಜುನನ ನಿಲವ ಕಂಡು ಬದುಕಿದೆನು.
ಹಾಡು ಮುಗಿಯಿತು. ಗೌರವಭಾವನೆಯಿಂದ ಬಳಿಗೆ ಬಂದು ಅರ್ಚಕ ನಮಸ್ಕರಿಸುತ್ತಾ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಮತ್ತು ಕೊನೆಯಲ್ಲಿ ಹೇಳಿದ : “ನಾಳೆಯ ದಿನ ನಾವು ಆತ್ಮಕೂರಿಗೆ ಹೋಗುತ್ತೇವೆ. ಯುಗಾದಿಯ ವೇಳೆಗೆ ಮತ್ತೊಮ್ಮೆ ಯಾತ್ರಿಕರ ಪರಿಷೆ ಇಲ್ಲಿ ಸೇರುತ್ತದೆ. ಇಷ್ಟೊಂದಲ್ಲದಿದ್ದರೂ ಆಗಲೂ ತಕ್ಕಮಟ್ಟಿಗೆ ಗಲಾಟೆ ಇರುತ್ತದೆ, ಆಗ ಮತ್ತೆ ಬರುತ್ತೇವೆ - ನಾವೆಲ್ಲಾ.”
ಮಹಾದೇವಿಯೂ ಕದಳಿಯ ವನಕ್ಕೆ ಹೋಗುವ ನಿರ್ಧಾರವನ್ನು ಆಗಲೇ ಮಾಡಿದ್ದಳು :
“ನಾನೂ ನಾಳೆ ಕದಳಿಯ ವನದತ್ತ ಪ್ರಯಾಣವನ್ನು ಕೈಗೊಳ್ಳಬೇಕೆಂದು ನಿರ್ಧರಿಸಿದ್ದೇನೆ.” ತನ್ನ ಮನೋಗತವನ್ನು ತಿಳಿಸಿದಳು.
“ಆಗಲಿ ತಾಯಿ, ಚುಂಚರಿಗೆಲ್ಲಾ ಆಗಲೇ ನಾನು ತಿಳಿಸಿದ್ದೇನೆ. ಯಾವ ದಿನ ಬೇಕಾದರೂ ತಾವು ಹೊರಡಬಹುದು. ಸಾಧ್ಯವಾದ ಎಲ್ಲ ಅನುಕೂಲಗಳನ್ನೂ ಅವರು ಮಾಡಿಕೊಡುತ್ತಾರೆ.” ಅರ್ಚಕ ತಾನು ಮಾಡಿರುವ ಏರ್ಪಾಡನ್ನು ತಿಳಿಸಿದ.
ಮರುದಿನ ಬೆಳಿಗ್ಗೆ ಪಾತಾಳಗಂಗೆಯಿಂದ ಮಹಾದೇವಿ ಬರುವಷ್ಟರಲ್ಲಿ ನಾಲ್ಕು ಜನ ಚುಂಚರು ಅವಳಿಗಾಗಿ ಕಾಯುತ್ತಾ ಸಿದ್ಧವಾಗಿ ನಿಂತಿದ್ದರು. ಒಂದು ತಂಬಿಗೆಯ ತುಂಬಾ ಅದೇ ತಾನೆ ಕರೆದು ತಂದ ನೊರೆಹಾಲು ಅವರ ಕೈಲಿತ್ತು. ಆದರಲ್ಲಿ ಸ್ವಲ್ಪ ಭಾಗವನ್ನು ಮಹಾದೇವಿ ತೆಗೆದುಕೊಂಡು ಉಳಿದುದನ್ನು ಅವರಿಗೇ ಕೊಟ್ಟಳು. ಭಕ್ತಿಯಿಂದ ಅವರದನ್ನು ಸ್ವೀಕರಿಸಿದರು.
“ಹೊರಡೋಣವೇ ಕದಳಿವನದ ಕಡೆಗೆ?” ಎಂಬ ಸೂಚನೆ ಅವರಿಂದ ಬಂದಿತು.
ಅವರಿಗೆ ತಾನೀಗಲೇ ಬರುವುದಾಗಿ ತಿಳಿಸಿ, ಮಲ್ಲಿಕಾರ್ಜುನನ ದೇವಾಲಯವನ್ನು ಪ್ರವೇಶಿಸಿದಳು ಮಹಾದೇವಿ. ಚನ್ನಮಲ್ಲಿಕಾರ್ಜುನನ ಎದುರು ನಿಂತಳು.
“ನಿನ್ನನ್ನು ಕೂಡಿ, ಸಮರಸಗೊಳ್ಳುವುದಕ್ಕಾಗಿಯೇ ನಿನ್ನ ಅಂತರಂಗದ ಗರ್ಭಗೃಹವೆಂದು ತಿಳಿದಿರುವ ಕದಳಿಯ ವನಕ್ಕೆ ನಡೆಯುತ್ತಿದ್ದೇನೆ. ಸರ್ವಶಕ್ತಿ ಸಮನ್ವಿತನಾಗಿ ನೀನಲ್ಲಿ ಮೈದೋರಿ ನನ್ನನ್ನು ಸ್ವೀಕರಿಸು” ಎಂದು ವಂದಿಸಿ