ಹೊರಗೆ ಬಂದಳು. ಕದಳಿಯ ಚಿತ್ರವನ್ನು ಮನಸ್ಸಿನಲ್ಲಿಯೇ ಕಟ್ಟಿಕೊಳ್ಳುತ್ತಾ ನಡೆಯತೊಡಗಿದಳು.
ದೇವಾಲಯವನ್ನು ಬಲಕ್ಕೆ ಬಿಟ್ಟು ಉತ್ತರಕ್ಕೆ ನಡೆದು ಆನಂತರ ವಾಯುವ್ಯದ ಕಡೆಗೆ ತಿರುಗುತ್ತಿತ್ತು ಮಹಾದೇವಿ ನಡೆಯುತ್ತಿದ್ದ ಮಾರ್ಗ. ಮಾರ್ಗದರ್ಶಕರಾದ ಚುಂಚರಲ್ಲಿಬ್ಬರು ಮುಂದೆ, ಇಬ್ಬರು ಹಿಂದೆ ನಡೆಯುತ್ತಾ ಅವಳನ್ನು ಕರೆದೊಯ್ಯುತ್ತಿದ್ದರು. ಮಹಾದೇವಿ ಅವರನ್ನು ಹತ್ತಿರ ಕರೆದು ಮಾತನಾಡಿಸಲು ಪ್ರಯತ್ನಿಸಿದಳು. ಭಾಷೆಯ ತೊಡಕಿನಿಂದಾಗಿ ಮಾತು ಸ್ಪಷ್ಟವಾಗುತ್ತಿರಲಿಲ್ಲ. ಆದರೆ ಭಯಭಕ್ತಿಯಿಂದ ಕೂಡಿದ ಅವರ ವರ್ತನೆಯನ್ನು ಕಂಡು ಅವಳಿಗೆ ಆಶ್ಚರ್ಯವಾಗುತ್ತಿತ್ತು.
ಮಧ್ಯಾಹ್ನದ ವೇಳೆಗೆ ಮಾರ್ಗ ಮಧ್ಯದಲ್ಲಿ ಒಂದು ಚುಂಚರ ಹಳ್ಳಿ ಸಿಕ್ಕಿತು. ಅಲ್ಲಿನ ಚುಂಚರ ಆತಿಥ್ಯವನ್ನು ಪಡೆದು, ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ನಂತರ ಮತ್ತೆ ನಡೆಯತೊಡಗಿದಳು.
ಮಧ್ಯಾಹ್ನದ ಬಿಸಿಲಿನಲ್ಲಿ ದಾರಿ ನಿಧಾನವಾಗಿ ಸಾಗುತ್ತಿತ್ತು. ಮಧ್ಯಾಹ್ನ ಕಳೆದು ಸೂರ್ಯ ಕ್ರಮೇಣ ಕೆಳಗಿಳಿಯಲು ಪ್ರಾರಂಭಿಸುತ್ತಿರುವ ವೇಳೆಗೆ, ತಾವು ನಡೆಯುತ್ತಿರುವ ಪರ್ವತದ ಶಿಖರದ ತುದಿಗೆ ಬಂದು ನಿಂತಿದ್ದರು. ಇದುವರೆಗೂ ನಿಧಾನವಾಗಿ ಏರಿಬಂದ ಪರ್ವತವನ್ನು ಅಲ್ಲಿ ನೇರವಾಗಿ ಕೆಳಗೆ ಇಳಿಯಬೇಕಾಗಿತ್ತು.
ಆ ಗಿರಿಯ ಶಿಖರದ ತುಟ್ಟತುದಿಯಲ್ಲಿ ನಿಂತು ನೋಡಿದರೆ ಕೆಳಗೆ ಕಣಿವೆಯಲ್ಲಿ ಹರಿಯುವ ಕೃಷ್ಣಾನದಿ ಒಂದು ಸಣ್ಣ ಕಾಲುವೆಯಂತೆ ಕಾಣುತ್ತಿತ್ತು. ಅವರು ನಿಂತಿರುವ ಆ ಪರ್ವತವನ್ನು ಕೃಷ್ಣಾ ನದಿ ಆರ್ಧಚಂದ್ರಾಕಾರದಲ್ಲಿ ಸುತ್ತುಹಾಕಿಕೊಂಡು ಹೋಗುತ್ತಿತ್ತು. ದಕ್ಷಿಣದ ಕಡೆಯಿಂದ ಬಂದು ಪೂರ್ವಕ್ಕೆ ಬಾಗುತ್ತಾ ಹರಿದು ಮತ್ತೆ ದಕ್ಷಿಣಕ್ಕೆ ತಿರುಗಿ ಮುಂದುವರೆದು ಮರೆಯಾಗುತ್ತಿತ್ತು. ಅರ್ಧಚಂದ್ರನ ಮಧ್ಯದಲ್ಲಿರುವ ನಕ್ಷತ್ರದಂತೆ ಈ ಪರ್ವತದ ಶಿಖರ ನಿಂತಿತ್ತು. ಆದುದರಿಂದಲೇ ಇದಕ್ಕೆ ಚುಕ್ಕಲ ಪರ್ವತವೆಂದು ಹೆಸರು ಬಂದಿರಬಹುದೆಂದು, ಪ್ರಭುದೇವ ಹೇಳಿದುದು ನೆನಪಿಗೆ ಬಂದಿತು ಮಹಾದೇವಿಗೆ.
ಅಲ್ಲಿ ಸ್ವಲ್ಪ ಕಾಲ ವಿಶ್ರಮಿಸಿಕೊಂಡು ಚುಕ್ಕಲ ಪರ್ವತವನ್ನು ಇಳಿಯತೊಡಗಿದರು.
ಪ್ರಾರಂಭದಲ್ಲಿಯೇ ಆ ಪರ್ವತ ಅತಿ ಕಡಿದಾಗಿ ಹೆಜ್ಜೆಹೆಜ್ಜೆಗೂ ಕೆಳಗೆ ಕೆಳಗೆ ಕೊಂಡೊಯ್ಯುತ್ತಿತ್ತು. ಬಹಳ ಎಚ್ಚರಿಕೆಯಿಂದ ಬರುವಂತೆ ಚುಂಚರು