ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಲ್ಯಾಣದಿಂದ ಕದಳಿ
೨೬೧


ಗಿರಿ ಮೇಲೆ ಬಿದ್ದೊಡೆ, ಎನಗೆ ಪುಷ್ಪಪೂಜೆಯೆಂಬೆನು ;
ಚನ್ನಮಲ್ಲಿಕಾರ್ಜುನಯ್ಯ ;
ಶಿರ ಹರಿದು ಬಿದ್ದೊಡೆ, ಪ್ರಾಣ ನಿಮಗರ್ಪಿತವೆಂಬೆನು.

ಬೆಳಿಗ್ಗೆ ಮುಂಚೆಯೇ ಎದ್ದಳು ಮಹಾದೇವಿ. ಚುಂಚರೆಲ್ಲಾ ಅದಕ್ಕೆ ಮೊದಲೇ ಎದ್ದು ಸಿದ್ಧರಾಗಿದ್ದರು. ನದಿಯ ದಂಡೆಯ ಮೇಲೆ ಪ್ರವಾಹಕ್ಕೆ ಮೇಲ್ಮುಖವಾಗಿ ನಡೆಯತೊಡಗಿದರು. ಕಲ್ಲುಬಂಡೆಗಳನ್ನು ಹತ್ತಿ ಇಳಿದು ಕಷ್ಟದಿಂದ ಒಂದೆರಡು ಮೈಲುಗಳಷ್ಟನ್ನು ನಡೆದ ಮೇಲೆ ಅಲ್ಲಿ ನದಿಯ ವೇಗ ಕಡಿಮೆಯಾಗಿ ಗಂಭೀರವಾಗಿ ನಿಂತಂತೆ ಕಾಣುತ್ತಿತ್ತು. ಬಿದಿರುಗಳನ್ನು ಕಟ್ಟಿದ ತೆಪ್ಪವೊಂದು ಅಲ್ಲಿ ಸಿದ್ಧವಾಗಿತ್ತು. ಅದರಲ್ಲಿ ಎಲ್ಲರೂ ಕೃಷ್ಣೆಯನ್ನು ದಾಟಿ ಆಚೆಯ ದಡವನ್ನು ಸೇರಿದರು.

ಅಲ್ಲಿಂದ ಮುಂದೆ ಒಂದೆರಡು ಮೈಲುಗಳಷ್ಟು ದೂರ ಹೋಗುವುದರೊಳಗಾಗಿ ಅತಿ ಸುಂದರವಾದ ಸ್ಥಳ ಗೋಚರಿಸಿತು. ಅದೊಂದು ಚಿಕ್ಕ ಹಳ್ಳ ; ಹರಿದು ಬಂದು ಅದು ಕೃಷ್ಣೆಯನ್ನು ಸೇರುವುದಕ್ಕೆ ಒಂದೆರಡು ಮೈಲುಗಳಷ್ಟು ಹಿಂದೆ ಮನೋಹರವಾದ ಸನ್ನಿವೇಶವನ್ನು ನಿರ್ಮಿಸಿಕೊಂಡಿತ್ತು.

ಸುತ್ತಲೂ ಎತ್ತರದ ಪರ್ವತಗಳು. ಮಧ್ಯದ ಆ ಕಣಿವೆಯ ಪ್ರದೇಶದಲ್ಲಿ ದಟ್ಟವಾದ ಹಸಿರು ಮರಗಳು. ಅವುಗಳ ಮಧ್ಯದಲ್ಲಿ ಹರಿಯುತ್ತಿದೆ ‘ಬುಗ್ಗುವಾಗು’ ಎಂದು ಚುಂಚರು ಕರೆಯುತ್ತಿರುವ ಈ ಸಣ್ಣ ಹಳ್ಳ. ಅದಕ್ಕೆ ಸ್ವಲ್ಪ ದೂರದಲ್ಲಿಯೇ ಚುಂಚರ ಒಂದು ಹಳ್ಳಿ, ಅಂದರೆ ಅವರ ನಾಲ್ಕಾರು ಗುಡಿಸಲುಗಳು.

ಅದೇ ತ್ರಿಕೂಟಪರ್ವತದ ಬುಡ. ತ್ರಿಕೂಟಪರ್ವತದ ತುಟ್ಟತುದಿಯ ಬಟ್ಟಬಯಲಿನಲ್ಲಿಯೇ ಕದಳಿವನವಿರುವುದೆಂದು ಪ್ರಭು ಹೇಳಿದ್ದ. ಕದಳಿಯ ಬುಡದಲ್ಲಿಯೇ ಈಗ ಇದ್ದಳು ಮಹಾದೇವಿ.

ಕದಳಿ ವನಕ್ಕೆ ಹೋಗುವುದಕ್ಕೆ ಮುನ್ನ ಇಲ್ಲಿ ಕೆಲವು ದಿನ ಇದ್ದು ಹೋಗಬೇಕೆಂದು ನಿರ್ಧರಿಸಿದಳು. ತನ್ನ ಬಯಕೆಯನ್ನು ಚುಂಚರಿಗೆ ತಿಳಿಸಿದಳು. ಸಂತೋಷದಿಂದ ಅವರು ಒಪ್ಪಿದರು. ಶ್ರೀಶೈಲದಿಂದ ಜೊತೆಯಲ್ಲಿ ಬಂದ ಚುಂಚರು ಮಹಾದೇವಿಯ ಅಪ್ಪಣೆ ಪಡೆದು ಹಿಂದಕ್ಕೆ ಹೊರಟುಹೋದರು. ಬುಗ್ಗುವಾಗು ಹಳ್ಳಿಯ ಚುಂಚರು ಅವಳ ಸೇವೆಯನ್ನು ಸಂತೋಷದಿಂದ ಕೈಗೊಂಡರು.

ಹಳ್ಳದ ದಡದಲ್ಲಿಯೇ ಒಂದು ಸಣ್ಣ ಗುಡಿಸಲನ್ನು ಹಾಕಿಕೊಟ್ಟರು. ನಿತ್ಯ ಹಾಲುಹಣ್ಣುಗಳನ್ನು ಅತಿವಿಶ್ವಾಸದಿಂದ ತಂದುಕೊಡುತ್ತಿದ್ದರು. ಶ್ರೀಶೈಲದ ಭ್ರಮರಾಂಬೆಯೇ ಈ ರೂಪದಿಂದ ಬಂದಿರುವಳೆಂಬಂತಹ ಮುಗ್ಧಭಕ್ತಿಯಿಂದ ಮಹಾದೇವಿಯನ್ನು ಕಾಣುತ್ತಿದ್ದರು ಚುಂಚರು.