ಬೀಳಿಸುತ್ತಿತ್ತು. ತನ್ನ ಮಾರ್ಗದಲ್ಲಿ ಬಂದ ಅಡ್ಡಿಗಳನ್ನೆಲ್ಲಾ ಎದುರಿಸಿ ತಪ್ಪಿಸಿಕೊಂಡು, ಕೊನೆಗೂ ಬಿಡದೆ ಕೃಷ್ಣೆಯನ್ನು ಸೇರಲು ಹೋಗುವ ಧನ್ಯತೆಯ ಸಾಹಸ ಗೋಚರಿಸಿದಂತಾಯಿತು ಮಹಾದೇವಿಗೆ ಅದನ್ನು ಕಂಡಾಗ.
ಆ ಗುಹೆಯ ಮುಂಭಾಗದ ಮಂಟಪ, ಮಹಾದೇವಿಗೆ ಅತಿಪ್ರಿಯವಾದ ಸ್ಥಳವಾಯಿತು. ಅಲ್ಲಿ ಕುಳಿತು ಗಂಟೆಗಳನ್ನು ನಿಮಿಷಗಳಂತೆ ಕಳೆಯುತ್ತಿದ್ದಳು. ಚುಂಚರು ಅದನ್ನು ‘ಅಕ್ಕಮ್ಮಗವಿ’ ಎಂದೇ ಕರೆಯತೊಡಗಿದರು. ಹಾಗೆಯೇ ಬಗ್ಗುವಾಗು ‘ಅಕ್ಕಮ್ಮವಾಗು’ ಆಯಿತು.
೯
ಒಂದು ಬೆಳಿಗ್ಗೆ ಮಹಾದೇವಿ ನಿತ್ಯದಂತೆ ಹಳ್ಳದಲ್ಲಿ ಸ್ನಾನಮಾಡಿ ಪೂಜೆ ಮಾಡಿದಳು. ಗುಡಿಸಲಿಗೆ ಹಿಂತಿರುಗುವ ವೇಳೆಗೆ ಚುಂಚರ ಮುಖಂಡ ಹಣ್ಣು ಹಾಲುಗಳನ್ನು ಹಿಡಿದು ನಿಂತಿದ್ದ. ನಮಸ್ಕರಿಸಿ ಮುಂದಿಟ್ಟ. ಮಹಾದೇವಿ ಅದನ್ನು ಮಲ್ಲಿಕಾರ್ಜುನನಿಗೆ ಅರ್ಪಿಸಿ ಸ್ವೀಕರಿಸಿದಳು. ಗವಿಯ ಬಳಿಗೆ ಹೋಗಿಬರುವುದಾಗಿ ಹೇಳಿ ಹೊರಟಳು.
ಗವಿಯ ಮುಂಭಾಗದಲ್ಲಿ ಪದ್ಮಾಸನಸ್ಥಿತಳಾಗಿ ಕುಳಿತಳು. ತನ್ನ ಜೀವನದ ಹಿಂದಿನ ಘಟನೆಗಳೆಲ್ಲಾ ಏಕೋ ಅವಳ ಮುಂದೆ ಇಂದು ಸುರುಳಿಯನ್ನು ಬಿಚ್ಚುತ್ತಿದ್ದುವು. ತಂದೆ - ತಾಯಿಗಳು, ಗುರು - ಲಿಂಗದೇವರು ಬಂದುಹೋದರು.
‘ಇದುವರೆಗಿನ ನನ್ನ ಸಾಧನೆಯ ಫಲ ನನ್ನ ತಂದೆ-ತಾಯಿಗಳಿಗೆ ಶಾಂತಿಯನ್ನು ಕೊಡಲಿ’ ಎಂದು ಹಾರೈಸಿದಳು. ಎಳೆಯ ವಯಸ್ಸಿನಿಂದಲೂ ತನ್ನ ಸಾಧನೆಗೆ ನೆರವಾದ ಗುರುಲಿಂಗರ ಮೂರ್ತಿಗೆ ಸಂಕಲ್ಪಪೂರ್ವಕ ನಮಸ್ಕಾರಗಳನ್ನು ಸಲ್ಲಿಸಿದಳು.
ಅನಂತರ ಕೌಶಿಕ ಅವಳ ಮನಸ್ಸಿನ ಮುಂದೆ ಸುಳಿದ :
‘ಆತನೇ ನನ್ನ ಸಾಧನೆಗೆ ನಿರ್ದಿಷ್ಟವಾದ ದಿಕ್ಕನ್ನು ತೋರಿಸಿದವನು. ಮದುವೆಯಾಗಲೇಕೂಡದೆಂಬ ನನ್ನ ಬಯಕೆ ಕೈಗೂಡುವಂತಹ ದೈವ ಸಂಕೇತದ ಒಂದು ನಿಮಿತ್ತ ಕಾರಣವಾಗಿ ಬಂದವನು ಆತ. ಆದರೆ ಅದರಿಂದ ಅವನ ಜೀವನ ದುಃಖಮಯವಾಯಿತು; ಆ ದುಃಖ ಬಹುಶಃ ತಾತ್ಕಾಲಿಕವಾಗಿದ್ದಿರಬಹುದು. ಈಗ ಅದನ್ನೆಲ್ಲಾ ಮರೆತು ಆತ ತನ್ನ ಸುಖವನ್ನು ಹುಡುಕಿಕೊಂಡಿರಬಹುದು.....’ ಹೀಗೆ ಹರಿಯುತ್ತಿತ್ತು ಅವಳ ಆಲೋಚನಾ ಸರಣಿ.