ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೬೬
ಕದಳಿಯ ಕರ್ಪೂರ


ರಸವಂತಿಯ ಮನಸ್ಸಿನ ಮುಂದೆ ಅಂದು ಮಹಾದೇವಿ ಉಡುತಡಿಯಿಂದ ತಮ್ಮನ್ನೆಲ್ಲಾ ಅಗಲಿಹೋದ ಕೊನೆಯ ದೃಶ್ಯ ಸುಳಿಯಿತು. ಅದನ್ನು ಮಹಾದೇವಿಯ, ಜ್ಞಾಪಕಕ್ಕೆ ತರುತ್ತಾ ಹೇಳಿದಳು :

“ಅಂದು ನೀವು ನಮ್ಮನ್ನೆಲ್ಲಾ ಬಿಟ್ಟು ಕಲ್ಯಾಣದ ಕಡೆಗೆ ಹೋಗುವಾಗ ನನಗೊಂದು ಕರ್ತವ್ಯವನ್ನು ಕೊಟ್ಟು ಹೋಗಿದ್ದಿರಿ. ‘ರಾಜರ ಬಳಿಯಲ್ಲಿದ್ದು ಅವರ ಸೇವೆ ಮಾಡುತ್ತಾ ದುಃಖವನ್ನು ಸಮಾಧಾನಪಡಿಸು’ ಎಂದು ನೇಮಿಸಿದ್ದಿರಿ. ಆ ಕರ್ತವ್ಯನಿರ್ವಹಣೆಯೇ ನನ್ನನ್ನು ಇಲ್ಲಿಯವರೆಗೂ ಕರೆದು ತಂದಿತು ತಾಯಿ.”

“ಅಂದರೆ.... ಅಲ್ಲಿರುವವರು....”

“ಹೌದು ತಾಯಿ, ಮಹಾರಾಜರು.”

ಇತ್ತಲೇ ಕಾತರಪೂರ್ಣವಾದ ದೃಷ್ಟಿಯನ್ನು ಬೀರಿದ್ದ. ಆತನನ್ನು ನೋಡಿದಳು ಮಹಾದೇವಿ. ಗಡ್ಡ ಬೆಳೆದ ಮುಖ, ಎತ್ತಿ ಕಟ್ಟಿದ ಜಟೆ, ಉದ್ದವಾದ ಬಿಳಿಯ ಕಪಿನಿ. ಆತನಾರೆಂಬುದನ್ನು ಹೇಳಿದರೂ ಒಪ್ಪಿಕೊಳ್ಳುವುದು ಕಷ್ಟವಾಗುವಂತಿತ್ತು, ಕೌಶಿಕನ ರೂಪ.

ಮಹಾದೇವಿ ಹಳ್ಳವನ್ನು ದಾಟಿ ಬರುತ್ತಿದ್ದಂತೆಯೇ ಕೌಶಿಕ ಮುಂದೆ ಹೋಗಿ ಮಹಾದೇವಿಯ ಎದುರಿವಲ್ಲಿ ಕುಸಿದು ಕುಳಿತ.

“ಕೌಶಿಕ ಮಹಾರಾಜರೇ, ಏಳಬೇಕು.... ತಾವು ಹೀಗೆ....”

ಮಹಾದೇವಿಯ ಮಾತು ಇನ್ನೂ ಬಾಯಲ್ಲಿದ್ದಂತೆಯೇ ಕೌಶಿಕ :

“ಅಲ್ಲ ಮಹಾದೇವಿ.... ನಾನು ಕೌಶಿಕ ಮಹಾರಾಜನಲ್ಲ.... ನಿನ್ನ ದಾಸಾನುದಾಸ.... ರಾಜ್ಯಬಂಧನವನ್ನೆಲ್ಲಾ ಕಿತ್ತೊಗೆದು ಬಂದಿರುವ ಶಿವಭಕ್ತ.” ತಲೆಯನ್ನೆತ್ತಿ ಮಹಾದೇವಿಯನ್ನು ನೋಡುತ್ತಾ ಹೇಳಿದ.

ಅಂದು ತನ್ನ ಬಲಾತ್ಕಾರಕ್ಕೆ ಗುರಿಯಾಗಿ, ಸೆರಗನ್ನು ಕಿತ್ತೆಸೆದ ಮಹಾದೇವಿಯ ನಗ್ನದೇಹವನ್ನು ಕಂಡ ಕೌಶಿಕನ ಕಣ್ಣುಗಳು, ಇಂದು ತಪೋಲಕ್ಷ್ಮಿಯೇ ಮೈವೆತ್ತು ನಿಂತಂತೆ ತೇಜಸ್ಸಿನ ಕಿರಣಗಳನ್ನು ಹೊರಸೂಸುತ್ತಿರುವ ಅಕ್ಕಮಹಾದೇವಿಯ ದಿವ್ಯ ವಿಗ್ರಹವನ್ನು ವೀಕ್ಷಿಸಿದುವು. ಮಹಾದೇವಿಯೂ ಅವನನ್ನೇ ದಿಟ್ಟಿಸಿ ನೋಡುತ್ತಿದ್ದಳು.

ಅವಳ ಉಜ್ವಲವಾದ ಕಣ್ಣುಗಳ ನೋಟವನ್ನು ಸಂಧಿಸಿ ಅವನ ಹೃದಯ ಕರಗಿ ಹೋಗುತ್ತಿರುವಂತೆ ತೋರಿತು. ತೀರಲಾರದ ಯಾವ ಬಯಕೆಯನ್ನು ಹೊತ್ತು ದೇಶದೇಶಗಳನ್ನು ತಿರುಗಿ ಶ್ರೀಶೈಲಕ್ಕೆ ಬಂದಿದ್ದನೋ, ಆ ಬಯಕೆಯ