ಪುಟ:Kadaliya Karpoora.pdf/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೮

ಕದಳಿಯ ಕರ್ಪೂರ

“ಅಗತ್ಯವೇನೆಂದು ಕೇಳುತ್ತಿದ್ದೀಯ? ನೀನಿಲ್ಲದೆ, ನನ್ನ ಜೀವನವೇ ಅನಗತ್ಯವಾಗಿತ್ತು. ಅದಾವ ಜನ್ಮದ ಸಂಸ್ಕಾರಬಂಧನವೋ, ನಿನ್ನ ವಿನಹ ನಾನು ಬಾಳುವುದು ಅಸಾಧ್ಯವೆಂದು ತೋರಿತು. ಅದು ಕೇವಲ ಕಾಮುಕತನದ ಹುಚ್ಚುವರ್ತನೆಯೆಂದು ಹಳಿಯಬೇಡ. ಅದರ ತೃಪ್ತಿಗಾಗಿ ನೂರಾರು ಮಾರ್ಗಗಳು ತೆರೆದಿದ್ದುವು. ಆದರೆ ಅದಕ್ಕೆ ಮೀರಿದ ಒಂದು ದಿವ್ಯಶಕ್ತಿಯ ಬಂಧನ ನನ್ನನ್ನು ಎಳೆಯಿತು. ನೀನಿಲ್ಲದೆ ನಾನು ಉಳಿಯಲಾರೆನೆಂದು ಅನ್ನಿಸಿತು. ಉಳಿದರೂ ವ್ಯರ್ಥವೆಂದು ಆತ್ಮ ತಿರಸ್ಕೃತಿ ತೋರಿತು. ಅದಕ್ಕಾಗಿ ಹೊರಟೆ. ನಾನು ಭಕ್ತನಾಗಬೇಕೆಂಬುದು ನಿನ್ನ ಆಶಯವಾಗಿತ್ತಲ್ಲವೇ? ಇದೋ ನಾನಿಂದು ಭಕ್ತನಾಗಿದ್ದೇನೆ. ನನ್ನನ್ನು ಸ್ವೀಕರಿಸಿ ಕಾಪಾಡು” ಎನ್ನುತ್ತಾ ಮಹಾದೇವಿಯ ಪಾದಗಳ ಮೇಲೆ ಬಿದ್ದ ಕೌಶಿಕ. ಅವನ ನಿಷ್ಠೆಯನ್ನು ಕಂಡು ಮರುಗಿತು ಮಹಾದೇವಿಯ ಮನಸ್ಸು.

‘ಅದಾವ ಜನ್ಮದ ಸಂಸ್ಕಾರಬಂಧನವೋ ಅವನನ್ನು ಇಲ್ಲಿಯವರೆಗೂ ಕರೆದು ತಂದಿದೆ. ಅದೇ ಸಂಸ್ಕಾರವೇ ಇನ್ನು ಅವನ ಉದ್ಧಾರಕ್ಕೂ ಕಾರಣವಾಗುತ್ತದೆ’ ಎಂದು ಭಾವಿಸುತ್ತಾ ಮಹಾದೇವಿ ಅವನನ್ನು ನೋಡುತ್ತಿದ್ದಳು. ಸತ್ವಶಕ್ತಿಯ ದೈವಾಂಶದ ಕಿರಣವೊಂದು ಅವಳ ಕಣ್ಣಲ್ಲಿ ಮಿಂಚಿತು. ಹೇಳಿದಳು:

“ನಿಜ, ಕಾಮುಕತನದ ಹುಚ್ಚುಕಲ್ಪನೆಗಿಂತ ಮಿಗಿಲಾದ ಬಂಧನ ನಮ್ಮಿಬ್ಬರಲ್ಲಿದೆಯೆಂದು ತೋರುತ್ತದೆ. ಆ ಮಟ್ಟಕ್ಕೆ ನಿನ್ನ ಪ್ರೇಮ ಏರಬಹುದಾದರೆ ನಾನು ಯಾವಾಗಲೂ ನಿನ್ನ ಪ್ರೇಮದ ಪುತ್ಥಳಿಯಾಗಿರುತ್ತೇನೆ. ಪ್ರೇಮಕ್ಕೆ ನೂರಾರು ಮುಖಗಳುಂಟು. ಅಲ್ಪತೆಯ ಸ್ವಾರ್ಥಸುಖದ ಮುಖವನ್ನು ಬಿಟ್ಟು ವಿಶ್ವವ್ಯಾಪಕವಾದ, ಭವ್ಯತೆಯ ಆನಂದಾನುಭವದ ಮುಖವನ್ನು ಪ್ರೇಮದ ವಿರಾಟ್ ರೂಪದಲ್ಲಿ ಕಾಣು. ಮೇಲೇಳು ಅಣ್ಣ ! ನಿನ್ನ ಮೋಹದ ಮಗಳಾಗಿ ಉಳಿಯುತ್ತೇನೆ. ಎದ್ದು ನನ್ನನ್ನು ಆಲಿಂಗಿಸು ತಂದೆ !” ಎಂದು ಅವನ ತಲೆಯ ಮೇಲೆ ಕೈಯನ್ನಿಟ್ಟು, ಅವನನ್ನು ಕೈ ಹಿಡಿದು ಮೇಲಕ್ಕೆತ್ತಿದಳು ಮಹಾದೇವಿಯಕ್ಕ.

ಶಿವಯೋಗಿಣಿಯ ಅಲೌಕಿಕವಾದ ಯೌಗಿಕಸ್ಪರ್ಶ ಅಪೂರ್ವವಾದ ಅನುಭವವನ್ನು ಕೌಶಿಕನಿಗೆ ತಂದುಕೊಟ್ಟಿತು. ಅವನ ಹೃದಯದ ಕತ್ತಲೆಯ ತೆರೆಯೊಂದು ಸರಕ್ಕನೆ ಸರಿದುಹೋದಂತಾಗಿ ಉಜ್ವಲವಾಗಿ ಬೆಳಕಿನ ಹೊಳೆತುಂಬಿ ತುಳುಕಿದಂತಾಯಿತು ಹೃದಯವನ್ನು. ಅದರ ಸಂಕೇತವೋ ಎಂಬಂತೆ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ರಸವಂತಿಯೂ ಕಣ್ಣೀರು ಸುರಿಸುತ್ತಿದ್ದಳು.