ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೬

ಕದಳಿ ಕರ್ಪೂರ

ಲಿಂಗ ಒಂದು ಕುರುಹು. ಇದನ್ನು ಪೂಜಿಸುವುದೆಂದರೆ ವಿಶ್ವಾತ್ಮನ ಒಳಗಿರುವ ಜೀವಾತ್ಮ, ತನ್ನ ಸ್ವರೂಪವನ್ನರಿತು ವಿಶ್ವಾತ್ಮನಾಗುವ ಹಂಬಲಿಕೆ. ಇದನ್ನು ಗುರು ಚಿತ್ಕಳೆಯಿಂದ ತುಂಬಿ ಚೈತನ್ಯದಾಯಕವಾದ ದಿವ್ಯಶಕ್ತಿಯನ್ನಾಗಿ ಮಾಡಿ ಶಿಷ್ಯನ ಕರಸ್ಥಳಕ್ಕೆ ನೀಡುತ್ತಾನೆ. ಆದುದರಿಂದಲೇ ಇದು ಮೂರ್ತಿಪೂಜೆಯಲ್ಲ; ಸ್ವಾತ್ಮಸ್ವರೂಪ ಪೂಜೆ. ಈ ಕುರುಹನ್ನು ಹಿಡಿದು ಅರುಹನ್ನು ಅರಿಯಬೇಕು. ಈ ಮಾರ್ಗದಲ್ಲಿ ಮುಂದುವರಿದಂತೆ ಈ ತತ್ತ್ವದ ರಹಸ್ಯವನ್ನು ನೀನೇ ಅರಿತುಕೊಳ್ಳುತ್ತೀಯ ಏಕೈಕನಿಪ್ಠೆಯಿಂದ ಇದನ್ನು ನೀನು ಪೂಜಿಸು’ ಎಂದು ಅದನ್ನು ಮಹಾದೇವಿಯ ಕರಸ್ಥಲದಲ್ಲಿಟ್ಟು, ಪೂಜೆ ಮಾಡುವ ವಿಧಾನವನ್ನು ತೋರಿಸಿದರು. ಲಿಂಗದಲ್ಲಿಯೆ ನೆಟ್ಟದೃಷ್ಟಿಯನ್ನಿಟ್ಟು ಮಾಡುವ ಶಿವಯೋಗವನ್ನು ಬೋಧಿಸಿದರು. ಪಂಚಾಕ್ಷರೀ ಮಂತ್ರ ರಹಸ್ಯವನ್ನು ಅರುಹಿದರು.

ಎಲ್ಲವನ್ನೂ ಮಹಾದೇವಿ ಏಕಾಗ್ರಚಿತ್ತದಿಂದ ಕೇಳುತ್ತಿದ್ದಳು. ಅವರ ಒಂದೊಂದು ಮಾತೂ ಬಿಂಬಗ್ರಾಹಕದಂತೆ ಅವಳ ಅಂತರಗದಲ್ಲಿ ಅಚ್ಚೊತ್ತಿದಂತಾಗುತ್ತಿತ್ತು. ಕೊನೆಯಲ್ಲಿ ಗುರುಗಳು ಹೇಳಿದರು:

“ಇನ್ನು ನೀನು ಪುನರ್ಜಾತಳಾದೆ. ನರಜನ್ಮವನ್ನು ದಾಟಿ, ಹರಜನ್ಮವನ್ನು ಪಡೆದೆ. ಮರವೆಯ ಜನ್ಮದಿಂದ ಎಚ್ಚತ್ತು. ಹರನ ಸ್ವರೂಪವನ್ನರಿತು ಹರನೇತಾನಾಗಿ ಪರಿಣಮಿಸುವುದೇ ಈ ಪೂಜೆಯು ತಂದುಕೊಡುವ ಪರಮ ಸಿದ್ಧಿ. ಶ್ರೀಶೈಲದ ಮಲ್ಲಿಕಾರ್ಜುನನೇ ನಿನ್ನ ಪತಿಯಾಗಿ ನಿನ್ನ ಕರಸ್ಥಲಕ್ಕೆ ಬಂದಿದ್ದಾನೆ. ಮಲ್ಲಿಕಾರ್ಜುನ ಎಲ್ಲರ ಪತಿ. ಭಕ್ತರೆಲ್ಲರೂ ಆತನ ಸತಿಯರು. ಶರಣ ಸತಿ, ಲಿಂಗಪತಿ-ಎಂಬ ಭಾವವೇ ಶರಣಮಾರ್ಗದ ರಹಸ್ಯ. ಶ್ರೀಶೈಲದ ಮಲ್ಲಿಕಾರ್ಜುನ ನಿನ್ನ ಹೃದಯಪ್ರಿಯನಾದ ಚೆನ್ನಮಲ್ಲಿಕಾರ್ಜುನನಾಗಲಿ. ಚೆನ್ನಮಲ್ಲಿಕಾರ್ಜುನನ ಚೆನ್ನಸತಿಯಾಗಿ ಅವನಲ್ಲಿ ಸಾಮರಸ್ಯಸುಖವನ್ನು ಪಡೆಯುವ ಮಾರ್ಗಕ್ಕೆ ಇದು ನಿನ್ನನ್ನು ಕೊಂಡೊಯ್ಯಲಿ.”

ಈ ಮಾತುಗಳಿಂದ ಮಹಾದೇವಿಯ ಎಳೆಯ ಚೈತನ್ಯದಲ್ಲಿ ಮಿಂಚಿನ ಹೊಳೆ ತುಳುಕಾಡಿದಂತಾಯಿತು. ಅವಳ ಆನಂದಬಾಷ್ಪಗಳೇ ಅವಳ ಮಂಗಳಕರವಾದ ಈ ಮದುವೆಗೆ ಧಾರೋಧಕವಾಗಿ ಪರಿಣಮಿಸಿದುವು.

ಬಂದ ಅತಿಥಿಗಳಿಗೆ ದೀಕ್ಷೆಯ ನಂತರ ಊಟ-ಉಪಚಾರಗಳು ಸಂಭ್ರಮದಿಂದ ನಡೆದುವು. ಕೇವಲ ಕೆಲವು ಪ್ರಮುಖರಿಗೆ ಮಾತ್ರ ಓಂಕಾರ ಆಹ್ವಾನವನ್ನು ಕೊಟ್ಟಿದ್ದ. ಊರಿನ ಪ್ರಮುಖ ರತ್ನಪಡಿ ವ್ಯಾಪಾರಿಗಳಾದ ಮಹಾದೇವ ಶೆಟ್ಟರೂ ಬಂದಿದ್ದರು. ನಾಗಭೂಷಣಶರ್ಮ, ಶಂಕರ ಆರಾಧ್ಯ, ಶಂಭು ಶಾಸ್ತ್ರಿ