ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕಲ್ಯಾಣದಿಂದ ಕದಳಿ
೨೬೯


ಮಹಾದೇವಿಯ ಉಜ್ವಲ ನೇತ್ರಗಳಿಂದ ಹೊರಟ ಕಿರಣಗಳು ಕೌಶಿಕನ ದೇಹವನ್ನು ಮುಟ್ಟಿ ಪವಿತ್ರಗೊಳಿಸುತ್ತಿರುವಂತೆ ತೋರುತ್ತಿದ್ದುವು. ಅವಳನ್ನೇ ನೋಡುತ್ತಾ ಪುನರ್ಜನ್ಮವನ್ನು ಪಡೆದವನಂತಾಗಿ ಕೇಳಿದ ಕೌಶಿಕ :

“ನೀನಾರು ಮಹಾತಾಯಿ? ನೀನು ಹೆಣ್ಣೆಂದು ತಿಳಿದ ನನ್ನ ಅಜ್ಞಾನದ ಪಾಪವನ್ನು ಹೋಗಲಾಡಿಸು, ಮಹಾದೇವಿ. ನೀನು ಹೆಣ್ಣಲ್ಲ, ಸಾಕ್ಷಾತ್ ಮಹಾದೇವಿ. ನಿನ್ನ ಮಗನನ್ನು ಕಾಪಾಡು, ತಾಯಿ.”

ಮತ್ತೆ ನಮಸ್ಕರಿಸಲು ಬಾಗಿದ ಕೌಶಿಕ. ಮಹಾದೇವಿ ಅವನನ್ನು ಕೈ ಹಿಡಿದು ತಡೆದಳು. ಬಿಚ್ಚಿ ಕೆದರಿದ ಅವನ ಜಟೆಯನ್ನು ಹಿಂದಕ್ಕೆ ನೇವರಿಸುತ್ತಾ ಮಾತೆಯ ಮಮತೆಯ ವಾತ್ಸಲ್ಯದಿಂದ ಸಂತೈಸಿದಳು. ಬಳಿಗೆ ಬಂದ ರಸವಂತಿಯನ್ನು ಇನ್ನೊಂದು ಕೈಯಿಂದ ತಬ್ಬಿಕೊಂಡಳು.

ದೈವಶಕ್ತಿಯನ್ನು ಸೇರಿದ ಜೀವಾತ್ಮಗಳ ಧನ್ಯತೆಯ ಕುರುಹಿನಂತೆ ಆ ಎರಡು ಜೀವಗಳು ಕಣ್ಣೀರ್ಗರೆಯುತ್ತಿದ್ದವು. ಭಕ್ತರನ್ನು ಉದ್ಧರಿಸುವ ಮಹಾಮಾತೆಯ ತೀರ್ಥಾಭಿಷೇಕವೆಂಬಂತೆ, ಮಹಾದೇವಿಯ ಕಣ್ಣುಗಳಿಂದಲೂ ಪುಣ್ಯಾಶ್ರುಧಾರೆ ಇಳಿಯುತ್ತಿತ್ತು. ಈ ಮಹಾಸಾಧನೆಗೆ ಚಿರಂತನ ಸಾಕ್ಷಿಯನ್ನೊರೆವಂತೆ, ಅಕ್ಕನ ಹಳ್ಳ ಜುಳುಜುಳು ಶಬ್ದ ಮಾಡುತ್ತಾ ಹರಿಯುತ್ತಿತ್ತು. ಮರಗಿಡಗಳೆಲ್ಲಾ ತಮ್ಮ ಪುಷ್ಪಾಂಜಲಿಯ ಕಾಣ್ಕೆಯನ್ನು ಮಹಾದೇವಿಯ ಪಾದಗಳ ಮೇಲೆ ಅರ್ಪಿಸುವಂತೆ ತಲೆಬಾಗಿ ಬೀಸುತ್ತಿದ್ದುವು. ಅನತಿ ದೂರದಲ್ಲಿದ್ದ ಬೆಟ್ಟಗುಡ್ಡಗಳು ಈ ಪುಣ್ಯಮಂಗಳ ಘಟನೆಯನ್ನು ಕಂಡು ಧನ್ಯನಾಗಿ ಹೆಮ್ಮೆಯಿಂದ ತಲೆಯೆತ್ತಿ ನಿಂತಿದ್ದುವು.

೧೦

ಮರುದಿನವೇ ಕದಳಿಯ ವನಕ್ಕೆ ಹೊರಡಬೇಕೆಂದು ಸಂಕಲ್ಪಿಸಿದ್ದ ಮಹಾದೇವಿ ಇನ್ನೂ ಕೆಲವು ದಿನ ಅಲ್ಲಿಯೇ ಉಳಿದಳು.

ಕೌಶಿಕನಲ್ಲಿ ಈಗ ಸಂಪೂರ್ಣ ಪರಿವರ್ತನೆಯಾಗಿತ್ತು. ವೇಷದಿಂದ ಮಾತ್ರ ಭಕ್ತನಾಗಿ ಬಂದವನು, ಈಗ ಆವೇಶದಿಂದಲೂ ಭಕ್ತನಾಗಿದ್ದ. ಸಾಧನೆಯ ಮಾರ್ಗದಲ್ಲಿ ಆತನನ್ನು ತೊಡಗಿಸಿದಳು ಮಹಾದೇವಿ. ರಸವಂತಿಯಂತೂ ಮಹಾದೇವಿಯನ್ನು ಕಂಡು ಧನ್ಯತೆಯ ಭಾವದಲ್ಲಿ ತನ್ನನ್ನು ತಾನೇ ಮರೆತಿದ್ದಳು. ಅವಳ ಮುಗ್ಧಭಕ್ತಿಗೆ ಮೆಚ್ಚಿದ ಅಕ್ಕ, ಅವಳಿಗೆ ಅನುಗ್ರಹವನ್ನಿತ್ತು ಸಾಧನೆಯ ರಹಸ್ಯವನ್ನು ಅರುಹಿದಳೂ.