ಮುಂದುವರಿಯಬೇಕಾಗಿತ್ತು. ಅಕ್ಕಪಕ್ಕಗಳಲ್ಲಿ ಸಾಲುಸಾಲಾಗಿ ಹಬ್ಬಿದ ಬಿಲ್ವವೃಕ್ಷಗಳು ಇವಳನ್ನು ಎದುರುಗೊಳ್ಳುತ್ತಿದ್ದುವು.
ಸ್ವಲ್ಪ ಮುಂದೆ ಹೋಗುವುದರೊಳಗಾಗಿ ಪರ್ವತ ದಕ್ಷಿಣಕ್ಕೆ ಬಾಗುತ್ತಿತ್ತು ಮತ್ತು ಮೊದಲಿಗಿಂತಲೂ ಕಡಿದಾಗಿ ಮೇಲೇರುತ್ತಿತ್ತು. ಆಗ ಮಹಾದೇವಿಗೆ ಹೊಳೆಯಿತು: ‘ತ್ರಿಕೂಟಪರ್ವತವೆಂದರೆ ಬೇರೆ ಬೇರೆ ಪರ್ವತದ ಮೂರು ಶಿಖರಗಳನ್ನು ಕುರಿತು ಹೇಳಿರುವುದಿಲ್ಲ. ಇದೊಂದೇ ಪರ್ವತದ ಮೂರು ಶಿಖರಗಳು ಅವು. ಒಂದು ಶಿಖರವನ್ನು ಹತ್ತಿಬಂದು, ಈಗ ಎರಡನೇ ಶಿಖರವನ್ನು ಏರತೊಡಗಿದ್ದೇವೆ.’
ಇದನ್ನು ಆಲೋಚಿಸುತ್ತಿದ್ದಂತೆಯೇ ಪ್ರಭುದೇವನ ವಚನವೂ ನೆನಪಿಗೆ ಬಂತಿತು : ‘ನೀನಾನೆಂಬುಭಯ ಸಂಗವಳಿದು ತಾನೇ ತಾನಾದ ತ್ರಿಕೂಟವೆಂಬ ಮಹಾಗಿರಿಯ ಮೆಟ್ಟಿ ನೋಡಲು ಬಟ್ಟಬಯಲು ಕಾಣಬಹುದು ನೋಡಾ’ ಎಂದು ಮುಂತಾಗಿ ಆತ ಹೇಳಿದ್ದ. ಆ ವಚನವನ್ನೇ ಮೆಲುಕು ಹಾಕುತ್ತಾ ಏರುತ್ತಿದ್ದಳು.
ಎರಡನೆಯ ಶಿಖರವನ್ನು ಏರಿದರು. ಅಲ್ಲಿ ಸ್ವಲ್ಪ ವಿಶ್ರಾಂತಿಯನ್ನು ಪಡೆಯಲು ಕುಳಿತರು.
ಎದುರಿಗಿರುವ ಪರ್ವತಗಳನ್ನೆಲ್ಲಾ ಮೀರಿ ನಿಂತಿರುವ ತ್ರಿಕೂಟಪರ್ವತದ ಮಧ್ಯಭಾಗದಲ್ಲಿ ಬಂದು ಕುಳಿತಿದ್ದರು. ತ್ರಿಕೂಟದೊಡನೆ ಹೊಯ್ಕೈಯಾಗಿ ನಿಂತ ಕೆಚ್ಚೆದೆಯ ಪರ್ವತವೆಂದರೆ ಚುಕ್ಕಲ ಪರ್ವತವೊಂದೇ ಎಂಬಂತೆ ತೋರಿತು. ಇವೆರಡು ಪರ್ವತಗಳ ಆಳವಾದ ಕಣಿವೆಯಲ್ಲಿ ಹರಿಯುತ್ತಿದ್ದ ಕೃಷ್ಣೆ, ಇವುಗಳನ್ನು ಬೇರ್ಪಡಿಸುವ ನೀಲಿರೇಖೆಯಂತೆ ಹೊಳೆಯುತ್ತಿದ್ದಳು.
ಮೇಲೆದ್ದು ನಡೆಯತೊಡಗಿದಳು. ಈಗ ಏರುತ್ತಿದ್ದುದು ಮೂರನೆಯ ಶಿಖರ. ಮೇಲೆಮೇಲೇರಿದಂತೆಲ್ಲಾ ಮಹಾದೇವಿಗೆ ಅನಿರ್ವಚನೀಯವಾದ ಆನಂದವಾಗುತ್ತಿತ್ತು.
“ದೇಹದ ತ್ರಿಗುಣಗಳನ್ನು ಮೆಟ್ಟಿ ಮೇಲೇರುವಂಥ ಅನುಭವ ಈ ತ್ರಿಕೂಟ ಪರ್ವತವನ್ನೇರುವುದು” ಎಂಬ ರಸವಂತಿಯ ಉದ್ಗಾರ, ಸತ್ಯವಾದುದಾಗಿತ್ತು.
“ಅಂತರಂಗದ ಕದಳಿ ಎಂದು ಹೇಳುತ್ತಿದ್ದೆಯಲ್ಲ, ಮಹಾದೇವಿ, ಆ ಅಂತರಂಗದ ಕದಳಿಗೆ ಏರಲು ಈಡಾ, ಪಿಂಗಳ, ಸುಷುಮ್ನೆ ನಾಡಿಗಳು ಸೇರುವ ಭ್ರೂಮಧ್ಯವೇ ತ್ರಿಕೂಟವಲ್ಲವೇ ?” - ಕೇಳಿದ ಕೌಶಿಕ. ಅವನ ಸಾಧನೆಯ ಮಾರ್ಗ ಮುಂದುವರಿಯುತ್ತಿರುವುದನ್ನು ಕಂಡು ತೃಪ್ತಳಾದಳು ಮಹಾದೇವಿ.