ಪುಟ:Kadaliya Karpoora.pdf/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೪

ಕದಳಿಯ ಕರ್ಪೂರ

ಆಗ ಅರಿಯುತ್ತೇವೆ. ಹೃದಯದ ಕದಳಿ ನಮ್ಮ ಕಾಲಕೆಳಗೇ ಇತ್ತೆಂಬುದನ್ನು. ಹೀಗೆ ಈ ಕದಳಿ ಇರುವ ಸ್ಥಳ, ಇದರ ರಚನಾವಿನ್ಯಾಸ, ಎಲ್ಲವೂ ಜೀವನದ ರಹಸ್ಯಕ್ಕೆ ಸಾಂಕೇತಿಕ ಸಾಕ್ಷಿಗಳಂತಿವೆ. ಅದೇ ಇದರ ವೈಶಿಷ್ಟ್ಯ.”

ಕದಳಿಯ ಸೌಂದರ್ಯದಲ್ಲಿ ಹುದುಗಿರುವ ರಹಸ್ಯವನ್ನು ಹೇಳಿದಳು ಮಹಾದೇವಿ. ರಸವಂತಿಯ ಹೃದಯದ ಗುಹೆಯಲ್ಲಿ ಅಡಗಿದುವು ಆ ಮಾತುಗಳು.

ಶ್ರೀಶೈಲದ ಮಹತ್ವವನ್ನೂ ಕದಳಿಯನ್ನೂ ಕುರಿತು ತಾನು ಸಾಂಕೇತಿಕವಾಗಿ ಹಾಡಿದ ವಚನವನ್ನು ನೆನಸಿಕೊಂಡು ನೆನಸಿಕೊಂಡು ಅದನ್ನು ಪೂರ್ಣಗೊಳಿಸಿದಳೂ ಮಹಾದೇವಿ :

ವನವೆಲಾ ಕಲ್ಪತರು, ಗಿಡವೆಲ್ಲಾ ಮರುಜೇವಣಿ,

ಶಿಲೆಗಳೆಲ್ಲಾ ಪರುಷ, ನೆಲವೆಲ್ಲಾ ಅವಿಯುಕ್ತ ಕ್ಷೇತ್ರ,

ಜಲವೆಲ್ಲಾ ನಿರ್ಜರಾಮೃತ

ಮೃಗವೆಲ್ಲಾ ಪರುಷಮೃಗ,

ಎಡಹುವ ಹರಳೆಲ್ಲಾ ಚಿಂತಾಮಣಿ !

ಚನ್ನಮಲ್ಲಿಕಾರ್ಜುನಯ್ಯ ನಚ್ಚಿನ ಗಿರಿಯ, ಸುತ್ತಿ ನೋಡುತ ಬಂದು

ಕದಳಿಯ ಬನವ ಕಂಡೆ ನಾನು.

ರಸವಂತಿ ಮುಂದೆ ಹೋಗುತ್ತ ಹೇಳಿದಳು :

“ಇಲ್ಲಿ ನೋಡಿ ತಾಯಿ, ಈ ಕಲ್ಲಿನಿಂದ ನೀರು ಹೇಗೆ ಜಿನುಗುತ್ತಿದೆ.”

ಬಾಳೆಯ ಗುಂಪುಗಳಿರುವ ಸ್ಥಳದಲ್ಲಿ, ಅವುಗಳ ಬುಡದಿಂದ ಸ್ವಲ್ಪ ದೂರದಲ್ಲಿ ಕಲ್ಲಿನಿಂದ ನೀರು ಜಿನುಗುತ್ತಿತ್ತು. ಅದು ಹಾಗೇ ಹರಿದುಬಂದು ಬಾಳೆಯ ಬುಡಗಳಲ್ಲಿ ಅಡಗಿ ಹೋಗುತ್ತಿತ್ತು. ಬಾಳೆಗಳಿಗಾಗಿಯೇ ಈ ಪರ್ವತ ಇಲ್ಲಿ ಆನಂದದ ಅಭಿಷೇಕ ಗೈಯುತ್ತಿದೆ ಎಂಬಂತೆ ತೋರುತ್ತಿತ್ತು.

ನಾಲ್ಕಾರು ಕಡೆಗಳಲ್ಲಿ ಹಾಗೆ ನೀರು ಜಿನುಗಿ ಬಾಳೆಯಬುಡಗಳಲ್ಲಿ ಅಡಗುತ್ತಿದ್ದುದರ ಹೊರತಾಗಿ ಅಲ್ಲಿ ಬೇರೆಲ್ಲಿಯೂ ನೀರಿನ ಆಶ್ರಯವಿರಲಿಲ್ಲ.

“ನೀವು ಇಲ್ಲಿರುವುದಕ್ಕೆ ನೀರಿನ ಅನುಕೂಲವಿಲ್ಲವಲ್ಲ ತಾಯಿ.” ರಸವಂತಿ ಕೇಳಿದಳು.

“ಹೌದು, ಇಲ್ಲಿ ಹತ್ತಿರ ಎಲ್ಲಿಯಾದರೂ ನೀರಿನ ಆಶ್ರಯವಿದೆಯೇ ಕೇಳಬೇಕು ಚುಂಚರನ್ನು” ಎಂದು ಮಹಾದೇವಿ ಅವರಿಗಾಗಿ ನೋಡಿದಳು. ಅವರು ಗುಹೆಯಲ್ಲಿರಲಿಲ್ಲ. ಗುಹೆಗೆ ಇಳಿದ ಮಾರ್ಗದಲ್ಲಿಯೇ ಮತ್ತೆ ಹೊರಗೆ