ಪುಟ:Kadaliya Karpoora.pdf/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣದಿಂದ ಕದಳಿ

೨೭೫

ಬಂದಳು ಮಹಾದೇವಿ, ರಸವಂತಿಯೊಡನೆ. ಮೊದಲು ಬಂದು ನಿಂತ ಗುಹೆಯ ಮೇಲ್ಛಾವಣಿಯ ಕಲ್ಲಿನ ಮೇಲೆ ಬಂದು ನಿಂತರು. ಚುಂಚರು ಅಲ್ಲಿಯೂ ಕಣ್ಣಿಗೆ ಬೀಳಲಿಲ್ಲ.

ಹತ್ತಿರಲ್ಲಿಯೇ ಇನ್ನೊಂದು ಚುಂಚರ ಹಳ್ಳಿ ಇರುವುದನ್ನು ಕೇಳಿದ್ದಳು ಮಹಾದೇವಿ. ‘ಲಿಂಗಭೇರಿ ಹಳ್ಳಿ’ ಎಂಬ ಅದರ ಹೆಸರೂ ನೆನಪಿತ್ತು. ಆ ಚುಂಚರು ಬಹುಶಃ ಅಲ್ಲಿಗೆ ಹೋಗಿರಬೇಕೆಂದು ಆಲೋಚಿಸುತ್ತಿರುವಷ್ಟರಲ್ಲಿ ಅವರೇ ಬರುತ್ತಿದ್ದರು ದೂರದಲ್ಲಿ.

ಅವಳ ಊಹೆ ನಿಜವಾಗಿತ್ತು. ಲಿಂಗಭೇರಿ ಹಳ್ಳಿಯಿಂದ ಅವರ ಜೊತೆ ಇನ್ನಿಬ್ಬರು ಚುಂಚರು ಬಂದಿದ್ದರು. ಹಣ್ಣು ಹಂಪಲುಗಳನ್ನು ತಂದು ಒಪ್ಪಿಸಿದರು ಅವರು.

ಮಹಾದೇವಿ ಇಲ್ಲಿ ನೀರಿನ ಅನುಕೂಲವನ್ನು ಕುರಿತು ವಿಚಾರಿಸಿದಳು. ಅದೊಂದೇ ಇಲ್ಲಿರುವ ಕೊರತೆಯೆಂದು ಅವರು ಹೇಳಿದರು. ಅಷ್ಟರಲ್ಲಿ ಇನ್ನೂ ಗುಹೆಯಲ್ಲಿಯೇ ಇದ್ದ ಕೌಶಿಕ ಸಂತೋಷದಿಂದ ಕೂಗುತ್ತಾ ಮೇಲೆ ಬಂದು :

“ನೀರು ಜೋರಾಗಿ ಹರಿದು ಬರುತ್ತಿದೆ, ಮಹಾದೇವಿ. ಸಣ್ಣ ಚಿಲುಮೆಯಂತೆ ಉಕ್ಕಿ ಹರಿಯುತ್ತಿದೆ.”

ಎಲ್ಲರೂ ಆತುರವಾಗಿ ಇಳಿದು ನೋಡಿದರು. ಸಣ್ಣಗೆ ಜಿನುಗುತ್ತಿದ್ದ ಒಂದು ಕಡೆ ಜಿನುಗುವುದಕ್ಕೆ ಬದಲಾಗಿ ಉಕ್ಕಿ ಹರಿಯುತ್ತಿತ್ತು. ಕೌಶಿಕ ಹೇಳಿದ:

“ನೀರು ಜಿನುಗುವ ಎಲ್ಲ ಕಡೆಗಳನ್ನೂ ನೋಡಿಕೊಂಡು ಹೋಗುತ್ತಿದ್ದೆ. ಇಲ್ಲಿ ಸ್ವಲ್ಪ ಹೆಚ್ಚಾಗಿ ಬರುತ್ತಿರುವಂತೆ ಕಾಣಿಸಿತು. ಅಲ್ಲದೆ ಮರದ ತುಂಡಿನಂತಹ ಒಂದು ವಸ್ತು ಸಿಕ್ಕಿಕೊಂಡಿರುವಂತೆ ಕಾಣಿಸಿತು. ಒಂದುಕಲ್ಲು ತಂದು ಅದನ್ನು ಕುಟ್ಟಿದೆ. ಒಂದು ಸಣ್ಣ ಚಕ್ಕೆ ಹಾರಿತು. ನೀರು ಪುಟಿಯತೊಡಗಿತು.”

ಚೆನ್ನಮಲ್ಲಿಕಾರ್ಜುನನ ಕೃಪೆಗಾಗಿ ಮಹಾದೇವಿ ಧನ್ಯವಾದಗಳನ್ನು ಅರ್ಪಿಸಿದಳು. ನೀರಿನ ಸಮಸ್ಯೆ ಬಗೆಹರಿಯಿತು.

ಚುಂಚರು ತಂದ ಹಣ್ಣು ಹಂಪಲುಗಳನ್ನು ತಿಂದರು. ರಾತ್ರಿ ಚುಂಚರು ಹಾಲನ್ನು ತಂದುಕೊಟ್ಟರು ಲಿಂಗಭೇರಿ ಹಳ್ಳಿಯಿಂದ. ಆ ರಾತ್ರಿ ಕಳೆಯಿತು.

ಕದಳಿಯ ಗುಹೆಯಲ್ಲಿ ಆ ರಾತ್ರಿ ! ಹೊರಗೆ ಕಾಡುಪ್ರಾಣಿಗಳ ಕೂಗು ಕೇಳುತ್ತಿತ್ತು. ಕೆಲವು ಹಕ್ಕಿಗಳಂತೂ ಅಳುವ ದೀರ್ಘಸ್ವರದಿಂದ ಕೂಗಿಕೊಳ್ಳುತ್ತಿದ್ದವು. ಹುಲಿಗಳು ಘರ್ಜಿಸುತ್ತಿದ್ದುವು. ಆದರೆ ಕದಳಿಯ ಗುಹೆಯ ಒಳಗಡೆ ಅವುಗಳಾವುವೂ ಹೋಗುವಂತಿರಲಿಲ್ಲ. ಅಂತರಂಗದ ಕದಳಿಯನ್ನು ಸೇರಿದವರಿಗೆ ಲೌಕಿಕ ಜಗತ್ತಿನ