ಪುಟ:Kadaliya Karpoora.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭

ಬೆಳೆಯುವ ಬೆಳಕು

ಮೊದಲಾದವರಲ್ಲದೆ, ಮಠದಿಂದ ಶಾಲೆಯ ಗುರುಗಳಾದ ಶಿವಯ್ಯ, ಮಲ್ಲಯ್ಯನವರೂ ಬಂದಿದ್ದರು. ಗುರುಪಾದಪ್ಪನಂತೂ ಇಲ್ಲಿಯ ವ್ಯವಸ್ಥೆಗೆ ತಾನೇ ನಿಂತಿದ್ದ.

ಊಟ ಮಾಡುತ್ತಿರುವಾಗ ನಾಗಭೂಷಣಶರ್ಮನಿಗೆ ಸ್ವಲ್ಪತಮಾಷೆ ಮಾಡಬೇಕೆನ್ನಿಸಿತು. ವೃತ್ತಿಯಲ್ಲಿ ಆತ ಪುರೋಹಿತ. ಸ್ವಲ್ಪ ಜಮೀನನ್ನು ಸಾಗುವಳಿ ಮಾಡಿಸಿಕೊಂಡು ನೆಮ್ಮದಿಯಾಗಿದ್ದ. ಓಂಕಾರನ ಪಕ್ಕದ ಮನೆಯೇ ಆತನದು. ಎಷ್ಟೋ ಸಾರಿ ಮಹಾದೇವಿಯನ್ನು ಎತ್ತಿ ಆಡಿಸಿದವನು, ಹೀಗಾಗಿ ಆಕೆಯೊಡನೆ ಆತನ ಸಲಿಗೆ ಹೆಚ್ಚು. ಆದುದರಿಂದ ತುಪ್ಪ ನೀಡಲು ಬಂದ ಮಹಾದೇವಿಯನ್ನು ಕುರಿತು:

“ತುಪ್ಪ ಸ್ವಲ್ಪ ಹೆಚ್ಚಾಗಿ ಹಾಕಮ್ಮ. ಇನ್ನೇನು ಅಬ್ಬಾ ಎಂದರೆ ನಿನ್ನಿಂದ ಇಂತಹ ಊಟ ಇನ್ನೊಂದು ಸಿಕ್ಕಬಹುದು ಅಷ್ಟೆ” ಎಂದ.

“ಅದ್ಯಾವುದು ಶರ್ಮರೇ ಆಗಲೇ ಇನ್ನೊಂದು ಊಟಕ್ಕೆ ಪೀಠಿಕೆ ಹಾಕುತ್ತಿದ್ದೀರಿ?” ಕೇಳಿದನು ಶಂಕರ ಆರಾಧ್ಯ. ಊರಿಗೆ ಪ್ರಮುಖವಾದ ಆತನ ದಿನಸಿ ಅಂಗಡಿಯಿದ್ದುದು ಪೇಟೆಯ ಬೀದಿಯಲ್ಲಾದರೂ ಅವನ ಮನೆಯು ಓಂಕಾರನ ಮನೆಯ ಸಮೀಪದಲ್ಲಿಯೇ.

“ಇನ್ನೇನು! ಶರ್ಮರು ಪುರೋಹಿತರಲ್ಲವೇ?” ವಿಷಯವೇನಿರಬಹುದೆಂದು ಸೂಚಿಸಿದರು ಶಂಭುಶಾಸ್ತ್ರಿಗಳು. ಊರಲ್ಲೆಲ್ಲಾ ಒಳ್ಳೇ ಶಿವಕಥಾ ಪ್ರವೀಣರೆಂದೂ, ವಿದ್ವಾಂಸರೆಂದೂ ಹೆಸರಾದವರು ಅವರು.

“ಓಹೋ? ಹಾಗಾದರೆ ಮಹಾದೇವಿಯ ಮದುವೆಯ ಊಟವನ್ನು ನಿರೀಕ್ಷಿಸುತ್ತಿದ್ದಾರೋ ಶರ್ಮರು! ಆ ಊಟ ಯಾವಾಗ ಬರುತ್ತದೋ?” ಕೇಳಿದರು ನಗುತ್ತಾ ರತ್ನಪಡಿ ವ್ಯಾಪಾರಿ ಮಹಾದೇವಶೆಟ್ಟರು. ಆ ನಗುವಿನಲ್ಲಿ ಎಲ್ಲರೂ ಒಡಗೂಡಿದರು. ಮತ್ತೆ ಶರ್ಮರೇ.

“ನೋಡಿದೇನಮ್ಮ, ನಿನ್ನ ಮದುವೆಯ ಊಟ ಯಾವಾಗ ಎನ್ನುತ್ತಿದ್ದಾರೆ ಶೆಟ್ಟರು. ಹೇಳಮ್ಮ ಹೇಳು. ಯಾವಾಗ ನಿನ್ನ ಮದುವೆಯ ಊಟ?” ಸ್ವಲ್ಪ ಕೀಟಲೆ ಮಾಡಬೇಕೆಂದೇ ಕೇಳಿದರು.

ಈ ವೇಳೆಗೆ ಮಹಾದೇವಿ ಎಲ್ಲರಿಗೂ ತುಪ್ಪ ಬಡಿಸಿ ಮುಗಿದಿತ್ತು. ಒಳಗೆ ಹೋಗುತ್ತಿದ್ದವಳು ಗಕ್ಕನೆ ನಿಂತಳು.

“ಏನಂದಿರಿ? ಮದುವೆಯ ಊಟವೇ? ಈಗ ಆಗುತ್ತಿರುವುದೇ ನನ್ನ ಮದುವೆಯ ಊಟ. ಗುರುಗಳು ಹೇಳಿದುದು ಕೇಳಲಿಲ್ಲವೇ! ಚೆನ್ನಮಲ್ಲಿಕಾರ್ಜುನನೇ