ಪುಟ:Kadaliya Karpoora.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮

ಕದಳಿಯ ಕರ್ಪೂರ

ಪತಿ, ನಾನೇ ಸತಿ. ಇದೇ ಮದುವೆ. ಇದಲ್ಲದೆ ಇನ್ನೆಂತಹ ಮದುವೆ?” ದಿಟ್ಟತನವಿತ್ತು ಮಹಾದೇವಿಯ ಮಾತಿನಲ್ಲಿ. ಮುಂಬರುವ ಗಂಡವನ್ನು ನೆನೆದು ನಾಚಿಕೆಯಿಂದ ಮುಖ ತಿರುಗಿಸಿ ‘ಹೋಗಿ’ ಎನ್ನುವಳೆಂದು ಭಾವಿಸಿದ್ದ ಶರ್ಮರಿಗೆ ಆಶ್ಚರ್ಯವಾಯಿತು. ಎಲ್ಲರೂ ಅವಕ್ಕಾದರು. ಹೋಳಿಗೆ ತುಪ್ಪ ಕಲೆಸುತ್ತಿದ್ದ ಕೈಗಳು ನಿಂತವು. ಮತ್ತೆ ಮಹಾದೇವಿ ನಗುತ್ತಾ:

“ಆದ್ದರಿಂದ ಈಗಲೇ ಎರಡೂ ಊಟ ಉಂಡುಬಿಡಿ. ಇನ್ನೊಂದು ಊಟ ಸಿಗಲಿಕ್ಕಿಲ್ಲ” ಎನ್ನುತ್ತಾ ಒಳಗೆ ಹೋದಳು.

“ನೋಡಿದಿರಾ ಗುರುಗಳೇ, ನಮ್ಮ ಮಹಾದೇವಿಯ ಬುದ್ಧಿವಂತಿಕೆಯನ್ನು” ಎಂದು ನಗುತ್ತಾ ಶರ್ಮ ನುಡಿದ ಗುರುಗಳತ್ತ ತಿರುಗಿ.

ಮಂಚದ ಮೇಲೆ ಕುಳಿತು ಈ ದಾಸೋಹದ ಪಂಕ್ತಿಯ ಸಂತೋಷವನ್ನು ನೋಡುತ್ತಾ ಅದರಲ್ಲಿ ಭಾಗಿಗಳಾಗಿದ್ದರು ಗುರುಲಿಂಗರು. ಅವರು ರಾತ್ರಿ ಪ್ರಸಾದವನ್ನು ಸ್ವೀಕರಿಸುತ್ತಿರಲಿಲ್ಲ. ಲಘುವಾಗಿ ಹಾಲು ಹಣ್ಣುಗಳನ್ನು ಸ್ವೀಕರಿಸುತ್ತಿದ್ದರು. ಮಹಾದೇವಿಯ ಮಾತನ್ನು ಕೇಳಿ ಅವರೂ ನಕ್ಕರು. ಆದರೆ ನಗುವಿಗಿಂತ ಮೀರಿದ ಭಾವವೊಂದು ಅವರ ಮುಖದಲ್ಲಿ ಗೋಚರವಾಗುವಂತಿತ್ತು.

ಊಟ ಮುಗಿದ ನಂತರ ಸಂತೋಷದ ಮಾತುಗಳಲ್ಲಿ ತೊಡಗಿದ್ದು, ಬಂದ ಅತಿಥಿಗಳು ತಮ್ಮ ಮನೆಯ ಕಡೆಗೆ ಹೊರಟಾಗ ರಾತ್ರಿ ಬಹಳ ಹೊತ್ತಾಗಿತ್ತು.

ಎಲ್ಲರಿಂದಲೂ ನಮಸ್ಕಾರವನ್ನು ಪಡೆದ ಗುರುಲಿಂಗದೇವರು, ಗುರುಪಾದಪ್ಪ ಮತ್ತು ಇತರ ಶಿಷ್ಯರೊಡನೆ ಮಠದತ್ತ ಹೊರಟರು. ಮಹಾಕಾರ್ಯವನ್ನು ಮಾಡಿದ ಅಪೂರ್ವ ತೃಪ್ತಿ ಅವರ ಮುಖದ ಮೇಲೆ ಮಿನುಗುತ್ತಿತ್ತು.

5

ರಾತ್ರಿಯೆಲ್ಲ ಮಹಾದೇವಿ ಗುರುವಿನ ಕರುಣೆಯಲ್ಲೇ ಓಲಾಡಿದಳು. ನರಜನ್ಮವನ್ನು ತೊಡೆದು ಹರಜನ್ಮಕ್ಕೆ ಮಾರ್ಗವನ್ನಿತ್ತ ಅವರ ಒಂದೊಂದು ಮಾತೂ ಅವಳ ಕಿವಿಯಲ್ಲಿ ರಿಂಗಣಗುಣಿಯುತ್ತಿತ್ತು. ಬೆಳಗಿನ ಜಾವ ಎಂದಿಗಿಂತ ಬಹಳ ಮೊದಲೇ ಎದ್ದು ಸ್ನಾನಾದಿಗಳನ್ನು ಮುಗಿಸಿ ಪೂಜೆಯಲ್ಲಿ ತೊಡಗಿದ್ದಳು.

ತದೇಕಚಿತ್ತಳಾಗಿ ಪೂಜೆಯಲ್ಲಿ ಮುಳುಗಿ ಮೈಮರೆತಿರುವ ಮಹಾದೇವಿಯನ್ನು ಲಿಂಗಮ್ಮ ನೋಡಿದಳು. ಗುರುಗಳು ಹೇಳಿದ ಮಾತುಗಳು ಅವಳ ಮುಂದೆ ಸುಳಿದವು ಮತ್ತು ಅಂದು ಮರುಳುಸಿದ್ಧರು ಮಾಡಿದ ಆಶೀರ್ವಾದದ ಉಜ್ವಲವಾದ ಮಾತುಗಳು ಎದುರು ನಿಂತಂತಾದವು. ಅಷ್ಟೇ ಅಲ್ಲದೆ ಅವಳ