ಹಿಂದೆ ಗುರುಗಳು ಶ್ರೀಶೈಲಯಾತ್ರೆಗೆಂದು ಉಡುತಡಿಯನ್ನು ಬಿಟ್ಟು ಹೋದಂದಿನಿಂದ, ಏನನ್ನೋ ಕಳೆದುಕೊಂಡಿದ್ದ ಮನಸ್ಸಿಗೆ ಅಮಿತವಾದ ಸಂತೋಷವನ್ನು ತಂದಿತ್ತು. ಆ ಆನಂದದ ಭಾವದಲ್ಲಿಯೇ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದರು.
ಓಂಕಾರಶೆಟ್ಟಿ ಪೂಜೆಯನ್ನು ಮುಗಿಸಿಕೊಂಡು ಹೊರಗೆ ಬಂದ. ಲಿಂಗಮ್ಮ ಒಂದು ತಟ್ಟೆಯಲ್ಲಿ ಹಣ್ಣುಗಳನ್ನು ತಂದು ಅವನ ಮುಂದಿಟ್ಟಳು.
“ತಿನ್ನುತ್ತಿರಿ. ಹಾಲು ಇನ್ನೂ ಸ್ವಲ್ಪ ಕಾಯಬೇಕು. ಈಗ ತಂದುಕೊಡುತ್ತೇನೆ” ಎಂದು ಒಳಗೆ ಹೋಗುತ್ತಾ,
“ಮಹಾದೇವಿ ಬಾ, ನಿನಗೂ ಹಣ್ಣು, ಹಾಲು ಕೊಡುತ್ತೇನೆ.” ಕರೆದಳು ಮಹಾದೇವಿಯನ್ನು ಲಿಂಗಮ್ಮ.
“ತಾಳವ್ವ, ಪೂಜೆ ಮಾಡಿ ಬಂದುಬಿಡುತ್ತೇನೆ.”
ಪೂಜೆಯ ಕೋಣೆಯಿಂದ ಹೊರಬಿತ್ತು ಮಹಾದೇವಿಯ ಧ್ವನಿ.
“ಬೆಳಿಗ್ಗೆ ಆಗಲೇ ಪೂಜೆಯನ್ನು ಮಾಡಲಿಲ್ಲವೇ? ನನಗಿಂತ ಮೊದಲೇ ಸ್ನಾನ, ಪೂಜೆ ಮಾಡಿದ್ದೀಯ!” ತಾಯಿ ಜ್ಞಾಪಿಸಿಕೊಟ್ಟಳು.
ಮಹಾದೇವಿ ಅದನ್ನೆನೂ ಮರೆತಿರಲಿಲ್ಲ; ಹೇಳಿದಳು:
“ಹೌದು, ಬೆಳಿಗ್ಗೆ ಮಾಡಿದ್ದೆ. ಈಗ ಬಹಳ ಸುಂದರವಾದ ಹೂವುಗಳು ಸಿಕ್ಕಿವೆ. ಮತ್ತೊಮ್ಮೆ ಪೂಜೆ ಮಾಡಿ ಬರುತ್ತೇನೆ, ಸ್ವಲ್ಪ ತಾಳು.”
ಲಿಂಗಮ್ಮ ಓಂಕಾರಶೆಟ್ಟಿಯನ್ನು ನೋಡಿದಳು. ಅವನೂ ಆಕೆಯನ್ನು ಅದೇ ಅರ್ಥದ ದೃಷ್ಟಿಯಿಂದ ವೀಕ್ಷಿಸಿದ. ಹತ್ತು ಹನ್ನೆರಡು ವರ್ಷದ ತಮ್ಮ ಮಗಳು ಮಹಾದೇವಿಯ ಭಕ್ತಿ, ಸಹಜವಾಗಿಯೇ ದೈವಭಕ್ತರಾದ ಆ ದಂಪತಿಗಳನ್ನೂ ಒಮ್ಮೊಮ್ಮೆ ಆಶ್ಚರ್ಯಗೊಳಿಸುತ್ತಿತ್ತು. ವಯಸ್ಸಿಗೆ ಮೀರಿದ ಅವಳ ಮನಸ್ಸಿನ ಹಂಬಲವನ್ನು ಕಂಡು ದಿಗ್ಭ್ರಮೆಗೊಳ್ಳುತ್ತಿದ್ದರು.
ಅಂದು ಗುರುಗಳು ಶ್ರೀಶೈಲಯಾತ್ರೆಗೆ ಹೊರಟಿದ್ದ ದಿನ, ಮಹಾದೇವಿಯ ವರ್ತನೆ ಓಂಕಾರನ ಮನಸ್ಸಿನ ಮುಂದೆ ಸುಳಿಯಿತು.
ಅಂದು ರಾತ್ರಿಯೆಲ್ಲಾ ಆಕೆ ಚೆನ್ನಾಗಿ ನಿದ್ದೆಯನ್ನೇ ಮಾಡಿರಲಿಲ್ಲ. ಏನೇನೋ ಕನವರಿಸುತ್ತಿದ್ದಳು. “ಮಲ್ಲಿಕಾರ್ಜುನಾ, ಮಲ್ಲಿಕಾರ್ಜುನಾ” ಎಂದು ನಿದ್ದೆಯಲ್ಲಿಯೇ ಕೂಗಿದುದನ್ನು ಕೇಳಿ ಲಿಂಗಮ್ಮ ತಟ್ಟಿ ಎಚ್ಚರಿಸಿದ್ದಳು. ಆಗಲೇ ಹೇಳತೊಡಗಿದ್ದಳು ಮಹಾದೇವಿ: