ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯

ಬೆಳೆಯುವ ಬೆಳಕು

ಮನಸ್ಸು ಇದಕ್ಕಿಂತ ಹಿಂದೆ ನೆಗೆಯಿತು. ತನ್ನ ನೆನಪಿನ ಆಳದಲ್ಲಿ ಅಡಗಿದ್ದ ಹಳೆಯ ಚಿತ್ತಗಳನ್ನು ಚಿತ್ತಭಿತ್ತಿಯ ಮೇಲೆ ಚಿತ್ರಿಸಿಕೊಳ್ಳತೊಡಗಿದಳು. ತನ್ನ ಮಾತುಗಳನ್ನು ತಾನೇ ಆಡಿ ತೋರಿಸುವವಳಂತೆ ಅವಳ ನೆನಪಿನ ಸುರುಳಿ ಬಿಚ್ಚತೊಡಗಿತ್ತು.

  • * *

ಅಂದು ನಾನು ಮಕ್ಕಳಿಲ್ಲದೆ ಕೊರಗುತ್ತಿದ್ದ ಕಾಲ. ಇನ್ನೆಲ್ಲಾ ಸಂಪತ್ತು ನಮಗೆ ಸಮೃದ್ಧವಾಗಿತ್ತು. ನಾಲ್ಕು ಜನರಿಗೆ ಕೈಯೆತ್ತಿ ನೀಡಬಹುದಾದಂತಹ ಅನುಕೂಲ ಮನೆಯಲ್ಲಿ. ನಾವಿದ್ದವರು ಇಬ್ಬರೇ. ಆದರೂ ಮನೆ ದಾಸೋಹದಂತೆ ನಡೆಯುತ್ತಿತ್ತು. ಮಠಕ್ಕೆ ಹೋದಾಗಲೆಲ್ಲಾ ನಮಗೆ ಧರ್ಮದ ವಿಷಯದಲ್ಲಿ ಬೋಧಿಸುತ್ತಿದ್ದರು ಗುರುಲಿಂಗರು. ಹೀಗೆ ಎಲ್ಲ ರೀತಿಯ ಅನುಕೂಲಗಳಿದ್ದರೂ ನಮ್ಮ ಜೀವನದಲ್ಲಿ ಒಂದೇ ಕೊರತೆಯಿತ್ತು. ನಮಗೆ ಮಕ್ಕಳಿರಲಿಲ್ಲ ಎಂದೂ ಅದನ್ನು ನಾವು ಆಡಿ ತೋರಿಸದಿದ್ದರೂ ನಮ್ಮಿಬ್ಬರಿಗೂ ಆ ದುಃಖದ ಅರಿವಿತ್ತು.

ಒಮ್ಮೆ ಮಠಕ್ಕೆ ಹೋದಾಗ ಗುರುಗಳು ಇದರ ಪ್ರಸ್ತಾಪಮಾಡಿದರು. ಅವರಿಗೇ ಅದು ಮನಸ್ಸಿಗೆ ಬಂದಿತ್ತೋ ಅಥವಾ ನನ್ನ ಪತಿ ಹೇಳಿದ್ದರೋ ತಿಳಿಯದು. ಅಂತೂ ಅವರು ಈ ವಿಷಯವನ್ನು ಎತ್ತಿದಾಗ ನನಗೆ ಆಶ್ಚರ್ಯವಾಯಿತು. ಅಷ್ಟರಲ್ಲಿ ಅವರೇ ಹೇಳಿದರು:

“ಯೋಚಿಸಬೇಡ, ತಾಯಿ; ಏಕೈಕನಿಷ್ಠೆಯಿಂದ ನಿನ್ನ ಭಕ್ತಿಯನ್ನು ಮುಂದುವರಿಸು. ಶಿವನ ಸಂಕಲ್ಪವಿಲ್ಲದೆ ಯಾವುದೂ ನಡೆಯಲಾರದು. ಅವನು ಕಣ್ಣು ಬಿಟ್ಟರೆ ನಿನಗೂ ಒಂದು ಮಗುವಾದೀತು”

“ಅಷ್ಟಾದರೆ ಸಾಕು, ಗುರುಗಳೇ. ಹೆಣ್ಣೋ ಗಂಡೋ ಯಾವುದೋ, ನಮ್ಮ ಮನೆಯನ್ನು ಬೆಳಗಿದರೆ ಸಾಕು.”

“ಆದೀತು.... ನಿಮ್ಮ ಮನೆಯನ್ನು ಮಾತ್ರವಲ್ಲದೆ ಮನವನ್ನೂ, ಮನುಕುಲವನ್ನೂ ಬೆಳಗುವ ಮಗುವಾದೀತು” ಎಂದರು.

‘ಅವರ ಈ ಮಾತೇ ವರವಾಗಲಿ’ ಎಂದು ಹಾರೈಸಿ ಮನೆಗೆ ಮರಳಿದೆ. ಅಂದು ರಾತ್ರಿ ಏನೇನೋ ಅಲೌಕಿಕ ಅನುಭವಗಳು. ಈ ಒಂದು ಚಿತ್ರ ಮಾತ್ರ ಅಚ್ಚೊತ್ತಿದಂತೆ ಮನಸ್ಸಿನಲ್ಲಿ ಉಳಿದಿದೆ.

ಹಾಲಿನಂತಹ ಅಚ್ಚಬಿಳಿಯ ಬಣ್ಣದ ಪತ್ತಲವನ್ನುಟ್ಟು ಮುತ್ತೈದೆಯೊಬ್ಬಳು ನಮ್ಮ ಮನೆಯನ್ನು ಪ್ರವೇಶಿಸಿದಳು. ದಟ್ಟವಾಗಿ ವಿಭೂತಿಯನ್ನು ಧರಿಸಿದ ಅವಳ ಹಣೆಯ ಮೇಲೆ, ಕುಂಕುಮದ ಕೆಂಪು ಅದೇತಾನೆ ಮೂಡುತ್ತಿರುವ ಹುಣ್ಣಿಮೆಯ