೩೦
ಕದಳಿಯ ಕರ್ಪೂರ
ಚಂದ್ರನಂತೆ ಕಂಗೊಳಿಸುತ್ತಿತ್ತು. ಅವಳ ಕೊರಳನ್ನು ಅಲಂಕರಿಸಿದ್ದು ರತ್ನದ ಹಾರವಲ್ಲ; ರುದ್ರಾಕ್ಷಿಯ ಸರ. ಮುಂಗೈಗಳೆರಡರಲ್ಲೂ ಬಳೆಗಳ ಜೊತೆಗೆ ರುದ್ರಾಕ್ಷಿಯ ಕಂಕಣ ಕಟ್ಟಿತ್ತು. ನೀಳವಾದ ಅವಳ ಕೇಶರಾಶಿಗಳು ಬೆನ್ನಮೇಲೆಲ್ಲಾ ಹರಡಿದ್ದುವು. ಮುಖ ಉಜ್ಜ್ವಲವಾದ ತೇಜಸ್ಸನ್ನು ಹೊರಸೂಸುತ್ತಿತ್ತು. ಕಣ್ಣುಗಳು ನಕ್ಷತ್ರಗಳಂತೆ ಹೊಳೆಯುತ್ತಿದ್ದುವು.
ಆಕೆ ತೀರಾ ನನ್ನ ಸಮೀಪಕ್ಕೆ ಬಂದಳು. ನನ್ನ ಕಣ್ಣುಗಳಲ್ಲಿ ತನ್ನ ಕಣ್ಣುಗಳನ್ನಿಟ್ಟಂತೆ ನನ್ನನ್ನು ದಿಟ್ಟಿಸಿದಳು. ನನ್ನ ದೇಹವೆಲ್ಲಾ ರೋಮಾಂಚನ ವಾದಂತಾಯಿತು. ಯಾವುದೋ ಲೋಕದತ್ತ ಜಾರಿಕೊಂಡು ಅಥವಾ ಏರಿಕೊಂಡು ಹೋಗುತ್ತಿರುವಂತೆ ಅನಿಸಿತು. ಈ ಮನೆ, ಮಠ, ಜಗತ್ತು ಎಲ್ಲವೂ ದೂರ ದೂರ ಹೋದಂತೆ ಭಾಸವಾಯಿತು. ಭೀತಿಯೋ, ಕುತೂಹಲವೋ, ಸಂತೋಷವೋ, ಯಾವುದೂ ಅರಿಯದ ಭಾವವೊಂದು ನನ್ನನ್ನಾಕ್ರಮಿಸಿ ಬೆಳೆಯಿತು. ಅದನ್ನು ತಡೆಯಲಾರದೆ ನಾನು ಕೂಗಿಕೊಂಡೆ;
“ನನಗೇನಾಗುತ್ತಿದೆ.... ! ನಾನೆಲ್ಲಿಗೆ ಹೋಗುತ್ತಿದ್ದೇನೆ....”
ಆಕೆ ಇನ್ನೂ ಹತ್ತಿರಕ್ಕೆ ಬಂದು ನನ್ನನ್ನು ಮುಟ್ಟಿದಂತಾಯಿತು. ಅಬ್ಬಾ! ಅದೊಂದು ಮಿಂಚಿನ ಶಕ್ತಿಯ ಸ್ಪರ್ಶ. ಶೀತಲ ಮಿಂಚು. ಪ್ರಕ್ಷುಬ್ಧವಾದ ನನ್ನ ಭಾವನೆಗಳ ತಳಮಳವೆಲ್ಲಾ, ಆ ಮಾಂತ್ರಿಕ ಸ್ಪರ್ಶದಿಂದ ಶಾಂತವಾಗಿ, ಪ್ರಶಾಂತವಾದ ಕ್ಷೀರಸಾಗರದ ಮುಂದೆ ನಿಂತಂತಾಯಿತು. ಮರುಕ್ಷಣದಲ್ಲಿಯೇ ಕಣ್ಣನ್ನು ಕೋರೈಸುವಂತಹ ಬೆಳಕಿನ ಮೊತ್ತ ಮೂಡಿದಂತಾಯಿತು. ಕ್ಷೀರಸಾಗರದಿಂದ ಮೂಡಿಬಂದ ಚಂದ್ರನಂತೆ, ಆ ಬೆಳಕಿನ ರಾಶಿಯೆಲ್ಲಾ ಮೂರ್ತಿಗೊಂಡು ಆಕೆಯ ಕೈಯನ್ನು ಸೇರಿತು. ಮಧುರವಾದ ಮಂದಹಾಸವನ್ನು ಬೀರುತ್ತಾ ಆ ಮೂರ್ತಿಯನ್ನು ನನ್ನತ್ತ ನೀಡಿದಳು. ನಾನು ದಿಗ್ಭ್ರಮೆಗೊಂಡಂತವಳಾಗಿ ಅದನ್ನೇ ದಿಟ್ಟಿಸುತ್ತಿದ್ದೆ ಕೊನೆಗೆ ಕೇಳಿದೆ:
“ನೀನಾರು ಮಹಾತಾಯಿ?”
“ನೀನಂದಂತೆ ನಾನು ಮಹಾತಾಯಿ. ಸಕಲ ಲೋಕಗಳನ್ನು ಹೆತ್ತ ಮುತ್ತೈದೆ.... ಇದನ್ನು ತೆಗೆದುಕೋ” ಎಂದು ಬೆಣ್ಣೆಯ ಮುದ್ದೆಯಂತಿದ್ದ ಬೆಳಕಿನ ಮೂರ್ತಿಯನ್ನು ನನ್ನ ಕೈಯಲ್ಲಿ ಇಟ್ಟಳು. ಮತ್ತೆ ಹೇಳಿದಳು:
“ಇದು ನನ್ನ ಶಕ್ತಿಯ ಒಂದು ಮುಖ; ಹೆಣ್ಣುತನದ ಸಾರ್ಥಕತೆಯನ್ನು ಸಾರುವ ಸಾತ್ವಿಕಶಕ್ತಿ ನನ್ನ ಮಾಯಾಶಕ್ತಿಯ ಮುಖದಲ್ಲಿಯೇ ಮಗ್ನವಾದ ಜಗತ್ತಿಗೆ ಇದೊಂದು ಉಜ್ಜ್ವಲ ಸೂರ್ಯನಂತೆ ಕಂಗೊಳಿಸಿ, ನನ್ನ ಶಕ್ತಿಯ ಸಾರ್ಥಕತೆಯನ್ನು