೩೨
ಈ ವೇಳೆಗೆ “ಮಹಾದೇವಿ.... ಮಹಾದೇವಿ” ಎಂದು ಕೂಗುತ್ತ ಒಳಗೋಡಿ ಬಂದಳು ಶಂಕರಿ. ಶಂಕರಿ ಪಕ್ಕದ ಮನೆಯ ನಾಗಭೂಷಣ ಶರ್ಮರ ಮಗಳು; ಮಹಾದೇವಿಯ ಗೆಳತಿ. ಸ್ವಲ್ಪ ಹೆಚ್ಚುಕಡಿಮೆ ಇಬ್ಬರಿಗೂ ಒಂದೇ ವಯಸ್ಸು, ಎಳೆಯತನದಿಂದಲೂ ಇಬ್ಬರೂ ಒಟ್ಟಿಗೇ ಬೆಳೆದವರು. ಅವರಿಬ್ಬರಿಗೂ ಅವೆರಡು ಮನೆಗಳು ತಮ್ಮ ಮನೆಗಳಂತೆಯೇ ಇದ್ದುವು.
“ಮಹಾದೇವಿ, ಇವತ್ತು ಹೂವನ್ನು ತರುವುದಕ್ಕೆ ಬರುವುದಿಲ್ಲವೇನೇ?” ಎನ್ನುತ್ತಾ ಒಳಗೆ ಬಂದಳು. ಸಾಮಾನ್ಯವಾಗಿ ದಿನವೂ ಮುಂಜಾನೆ ಊರಮುಂದಿರುವ ಉದ್ಯಾನ್ಯಕ್ಕೆ ಹೋಗಿ ಅಲ್ಲಿಂದ ಹೂವುಗಳನ್ನು ತರುವುದು ಅವರ ರೂಢಿಯಾಗಿತ್ತು.
“ಬಾ, ಶಂಕರಿ”, ಕರೆಯುತ್ತಾ ಹೇಳಿದಳು ಲಿಂಗಮ್ಮ : “ಮಹಾದೇವಿಯ ಪೂಜೆ ಇನ್ನೂ ಮುಗಿದಿಲ್ಲ”
“ಶಂಕರಿ! ಬಂದೆ ತಾಳೆ.” ಪೂಜೆಯ ಕೋಣೆಯಿಂದಲೇ ಹೇಳಿದಳು.
ಅತ್ತ ನಡೆಯುತ್ತಾ ಶಂಕರಿ: “ಓ! ಏನು ಶರಣಮ್ಮ! ಇನ್ನೇನು ಹಾಗಾದರೆ ನಿನ್ನ ಜೊತೆ ನಮಗೆಲ್ಲ ತಪ್ಪಿದಂತೆಯೇ” ಹಾಸ್ಯ ಮಾಡಿ ನಕ್ಕಳು.
ಈ ವೇಳೆಗೆ ಮಹಾದೇವಿ ಹೊರಗೆ ಬಂದಿದ್ದಳು. ರಾಜಬೀದಿಯಲ್ಲಿ ನಡೆಯ ತೊಡಗಿದರು.
ಉಡುತಡಿಯ ಪ್ರಮುಖ ಬೀದಿಯೆಂದರೆ ಇದೇ. ಪೂರ್ವಾಭಿಮುಖವಾದ ಅರಮನೆಯ ಮಹಾದ್ವಾರದಿಂದ ನೇರವಾಗಿ ಹೊರಟ ಈ ರಸ್ತೆ, ಊರಿನ ಮಧ್ಯದಲ್ಲಿ ನಡೆದು ಊರಿನ ರಾಜೋದ್ಯಾನವನ್ನು ತಲುಪುತ್ತಿತ್ತು. ಅರಮನೆಯ ಮಹಾದ್ವಾರದಿಂದ ನಾಲ್ಕಾರು ಹೆಜ್ಜೆಗಳು ಈ ರಸ್ತೆಯಲ್ಲಿ ಬಂದೊಡನೆಯೇ, ಉತ್ತರ-ದಕ್ಷಿಣವಾಗಿ ಹಬ್ಬಿದ ಎರಡೆರಡು ಸಾಲು ಪೇಟೆಯ ಬೀದಿಗಳು ಇದಕ್ಕೆ ಬಂದು ಸೇರುತ್ತಿದ್ದವು. ಆ ಪೇಟೆಬೀದಿಗಳು ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದುವು.
ರಾಜಬೀದಿಯಲ್ಲಿ ಇಕ್ಕೆಲಗಳಲ್ಲಿಯೂ ಶ್ರೀಮಂತ ಹರ್ಮ್ಯಗಳು ತಲೆಯೆತ್ತಿದ್ದುವು. ಊರಿನ ಪ್ರಮುಖ ವ್ಯಾಪಾರಿಗಳು, ಅಧಿಕಾರಿಗಳು, ಶ್ರೀಮಂತರು, ಧೀಮಂತರು ಎಲ್ಲರೂ ವಾಸಿಸುತ್ತಿದ್ದುದು ಸಾಮಾನ್ಯವಾಗಿ ಇಲ್ಲಿಯೇ. ಈ ರಸ್ತೆಯ ಎರಡು ಕಡೆಗಳಲ್ಲಿಯೂ ಊರು ಹಬ್ಬಿ ಹರಡಿತ್ತು. ಅರಮನೆಗೂ ರಾಜೋದ್ಯಾನಕ್ಕೂ ಸರಿಸಮನಾಗಿ, ಮಧ್ಯದಲ್ಲಿ ಓಂಕಾರನ ಮನೆಯಿತ್ತು ಈ ರಾಜಬೀದಿಯಲ್ಲಿ.