ವಿದ್ಯೆಯ ಸಹಜ ಶಕ್ತಿಯನ್ನು ಬಲ್ಲ ಗುರುಲಿಂಗರು, ಆಧ್ಯಾತ್ಮದ ರಹಸ್ಯವನ್ನು ಕ್ರಮೇಣ ಹೇಳತೊಡಗಿದ್ದರು. ವಯಸ್ಸಿಗೆ ಮೀರಿದ ಅವಳ ಆಕಾಂಕ್ಷೆಯನ್ನೂ ಕುತೂಹಲವನ್ನೂ ಕುಶಾಗ್ರಮತಿಯನ್ನೂ ಕಂಡು ಸಂತೋಷಗೊಳ್ಳುವರು. ಸಾಮಾನ್ಯರಿಗೆ ಅಗೋಚರವಾದ ಶಕ್ತಿಯೊಂದು ಅವಳಲ್ಲಿ ವಿಕಾಸಗೊಳ್ಳುತ್ತಿದ್ದುದನ್ನು ಕಾಣುತ್ತಿದ್ದರು ಗುರುಲಿಂಗರು.
ಆದ್ಯರ ವಚನಗಳನ್ನು ಮಹಾದೇವಿಗೆ ಹೇಳಿಕೊಡುವರು. ಅವರ ಪರಂಪರೆಯನ್ನು ಉಜ್ವಲವಾದ ರೀತಿಯಲ್ಲಿ ಬೆಳೆಸಿಕೊಂಡು ಹೋಗಲು ಸಾಹಸಪಡುತ್ತಿದ್ದ ಬಸವೇಶ್ವರನ ಕೀರ್ತಿಯೂ, ಅಲ್ಲದೆ ಜಂಗಮರ ಮೂಲಕ ಕೆಲವು ವಚನಗಳೂ ಬರತೊಡಗಿದ್ದವು. ಅವುಗಳನ್ನೆಲ್ಲಾ ಮಹಾದೇವಿಗೆ ಹೇಳಿಕೊಡುತ್ತಿದ್ದರು. ತಮ್ಮದೇ ಆದ ಒಂದು’ ಬಗೆಯಲ್ಲಿ ಹಾಡುವುದನ್ನು ಕಲಿಸುತ್ತಿದ್ದರು. ಅದೆಲ್ಲವನ್ನೂ ಮಹಾದೇವಿ ಗ್ರಹಿಸುತ್ತಿದ್ದ ರೀತಿ, ಒಮ್ಮೊಮ್ಮೆ ಅವರಿಗೆ ಅಚ್ಚರಿಯನ್ನುಂಟು ಮಾಡುತ್ತಿತ್ತು.
ಶ್ರೀಶೈಲಯಾತ್ರೆಗೆ ಹೊರಡುವ ಮುನ್ನ ಕೆಲವು ಹೊಸ ವಚನಗಳನ್ನು ಶ್ಲೋಕಗಳನ್ನೂ ಆಕೆಗೆ ಕೊಟ್ಟು ಹೋಗಿದ್ದರು. ಐದಾರು ತಿಂಗಳ ಯಾತ್ರೆಯ ನಂತರ ಈಗ ಕುತೂಹಲದಿಂದ ಅವಳ ಬರವನ್ನು ಕಾದು ಕುಳಿತಿದ್ದರು.
ಆಕೆ ಶಂಕರಿಯೊಡನೆ ಮಠದ ಆವರಣವನ್ನು ಪ್ರವೇಶಿಸಿ ಶಾಲೆಗೆ ಹೋದುದನ್ನು ನೋಡಿದರು.ಅದು ಮುಗಿದೊಡನೆ ನೇರವಾಗಿ ಇಲ್ಲಿಗೆ ಬರುತ್ತಾಳೆಂದು ಹೊಸ ವಚನಗಳ ಓಲೆಗರಿಗಳನ್ನು ಆರಿಸಿ ಸಿದ್ಧಗೊಳಿಸತೊಡಗಿದರು. ನಿರೀಕ್ಷೆಗಿಂತ ಮೊದಲೇ ಮಹಾದೇವಿ ಬಂದು ನಮಸ್ಕರಿಸಿದಳು.
“ಬಾ ಮಹಾದೇವಿ, ಶಾಲೆ ಮುಗಿಯಿತೇ?”
“ಮುಗಿಯಿತು ಗುರುಗಳೇ, ಪಾಠ ಬರೆಯಲು ಕೊಟ್ಟಿದ್ದರು. ಇನ್ನೂ ಹುಡುಗರು ಬರೆಯುತ್ತಿದ್ದರು. ನಾನು ಜಾಗ್ರತೆ ಬರೆದು ತೋರಿಸಿ, ತಮ್ಮ ಬಳಿಗೆ ಹೋಗುಬೇಕೆಂದು. ಅಪ್ಪಣೆ ಪಡೆದು ಓಡಿ ಬಂದೆ.... ಎಷ್ಟು ದಿವಸವಾಯಿತು ಗುರುಗಳೇ ನಿಮ್ಮ ಪಾಠವಿಲ್ಲದೆ!” ಉತ್ಸಾಹದಿಂದ ಹೇಳಿದಳು.
“ನಿಜ ಮಹಾದೇವಿ.... ನಾನು ಕೊಟ್ಟ ವಚನಗಳನ್ನೆಲ್ಲಾ....” ಮಾತಿನ ಮಧ್ಯದಲ್ಲಿಯೇ ಮಹಾದೇವಿಯ ಉತ್ತರ ಸಿದ್ಧವಾಗಿತ್ತು:
“ಓ! ಎಲ್ಲವನ್ನೂ ಕಲಿತಿದ್ದೇನೆ ಗುರುಗಳೇ....”
“ಎಲ್ಲ ಯಾವುದಾದರೂ ಒಂದನ್ನು ಹೇಳಮ್ಮ ನೋಡೋಣ.”
ಪುಟ:Kadaliya Karpoora.pdf/೩೯
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೩೮
ಕದಳಿಯ ಕರ್ಪೂರ