ಮಹಾದೇವಿ ಕ್ಷಣಕಾಲ ಆಲೋಚಿಸಿದಳು. ಇನ್ನೇನು ಪ್ರಾರಂಭಿಸಬೇಕು, ಅಷ್ಟರಲ್ಲಿ ಮತ್ತೆ ಗುರುಗಳು ಹೇಳಿದರು:
“ಆ ಮೂಲೆಯಲ್ಲಿರುವ ಏಕನಾದವನ್ನು ತೆಗೆದುಕೋ ಬೇಕಾದರೆ.”
“ಬೇಡ ಗುರುಗಳೆ. ಈಗ ನಾನು ಹಾಡುವುದಿಲ್ಲ. ಹಾಗೇ ಹೇಳುತ್ತೇನೆ. ಇನ್ನೂ ಕೆಲವು ವಚನಗಳನ್ನು ಹೇಳಿಕೊಡಿ. ಇನ್ನೊಂದು ದಿನ ಹಾಡುತ್ತೇನೆ.”
“ಹಾಗೆಯೇ ಆಗಲಿ. ಈಗ ಬೇಕಾದಷ್ಟು ಹೊಸ ವಚನಗಳನ್ನು ತಂದಿದ್ದೇನೆ.” ಓಲೆಗರಿಗಳ ಕಡೆ ನೋಡುತ್ತಾ ಹೇಳಿದರು ಗುರುಗಳು.
“ಹೌದೇ, ಗುರುಗಳೇ?” ಉತ್ಸಾಹದಿಂದ ಕೇಳಿದಳು ಮಹಾದೇವಿ.
“ಅದರ ಕಥೆ ಆಮೇಲೆ ಹೇಳುತ್ತೇನೆ. ಎಲ್ಲಿ ಈಗ ಒಂದೆರಡು ವಚನಗಳನ್ನು ಹೇಳು.” ಆಗ ಮಹಾದೇವಿ ಪ್ರಾರಂಭಿಸಿದಳು:
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ;
ಸುಳಿದು ಬೀಸುವ ವಾಯು ನಿಮ್ಮ ದಾನ;
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ
ಎಡರಡಸಿದಲ್ಲಿ ಮೃಡ ನಿಮ್ಮ ನೆನೆವರು;
ಎಡರಡಸಿದ ವಿಪತ್ತು ಕಡೆಯಾಗಲೊಡನೆ,
ಮೃಡ, ನಿಮ್ಮನೆಡಹಿಯೂ, ಕಾಣರು ರಾಮನಾಥ
ಗದ್ಯಕ್ಕಿಂತ ಬೇರೆಯಾದ ಸ್ವಲ್ಪ ಲಯಬದ್ಧವಾದ ರೀತಿಯಲ್ಲಿ ಹೇಳಿದಳು ದೇವರ ದಾಸಿಮಯ್ಯನ ಈ ವಚನಗಳನ್ನು. ಗುರುಗಳು ಕಣ್ಣು ಮುಚ್ಚಿ ಕೇಳುತ್ತಿದ್ದರು:
“ಆಹಾ! ಎಷ್ಟುಸಾರಿ ಕೇಳಿದರೂ ಹಳತಾಗದ ಮಾತುಗಳಮ್ಮಾ ಇವು. ಬಸವಣ್ಣನವರ ಒಂದೆರಡು ವಚನಗಳನ್ನು ಕೊಟ್ಟಿದ್ದೆನೆಲ್ಲ. ಬರುತ್ತವೆಯೇ?”
“ಓಹೋ ಬರುತ್ತವೆ” ಎಂದು ಹೇಳತೊಡಗಿದಳು:
ಅತ್ತಲಿತ್ತ ಹೋಗದಂತೆ ಹೇಳವನ ಮಾಡಯ್ಯ ತಂದೆ
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ
ಕೂಡಲಸಂಗಮದೇವಾ, ನಿಮ್ಮ ಶರಣರ ಪಾದವಲ್ಲದೆ,
ಅನ್ಯ ವಿಷಯಕ್ಕೆಳಸದಂತೆ ಇರಿಸು ನಿಮ್ಮ ಧರ್ಮ.
ಪುಟ:Kadaliya Karpoora.pdf/೪೦
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಬೆಳೆಯುವ ಬೆಳಕು
೩೯