ಮುಗ್ಧವಾದ ಎಳೆಯ ಹೃದಯದ ತನ್ಮಯತೆಯಲ್ಲಿ ಜೀವಂತವಾಗಿ ಮೂಡಿ
ಬರುತ್ತಿದ್ದ ಅಣ್ಣನವರ ಮಾತುಗಳು ಗುರುಲಿಂಗದೇವರ ಕಣ್ಣುಗಳಲ್ಲಿ
ಆನಂದಬಾಷ್ಪಗಳನ್ನು ತರಿಸಿದುವು.
“ತುಂಬಾ ಸುಂದರವಾಗಿ ಹೇಳುತ್ತಿದ್ದೀಯಮ್ಮ!” ಉದ್ಗರಿಸಿದರು.
“ವಚನವೇ ಹಾಗಿದೆ ಅಲ್ಲವೇ ಗುರುಗಳೇ?” ಕೇಳಿದಳು ಮಹಾದೇವಿ.
“ಹೌದು, ಬಸವಣ್ಣನವರ ವ್ಯಕ್ತಿತ್ವವನ್ನು ಪ್ರತ್ಯಕ್ಷವಾಗಿ ಕಂಡುಬಂದ ನನಗೆ,
ಅದರ ಅರ್ಥ ಇನ್ನೂ ಅಗಾಧವಾಗಿ ತೋರುತ್ತಿದೆ. ಇಡೀ ಅವರ ಸಾಧನೆಯೇ
ನನ್ನ ಮುಂದೆ ನಿಂತಂತಾಗುತ್ತದೆ.”-ಕಣ್ಣುಮುಚ್ಚಿ ಹೇಳಿದರು ಗುರುಲಿಂಗರು.
“ಅಣ್ಣನವರನ್ನು ಪ್ರತ್ಯಕ್ಷವಾಗಿ ಕಂಡು ಬಂದಿರಾ, ಗುರುಗಳೇ! ಅವರೂ
ಶ್ರೀಶೈಲಕ್ಕೆ ಬಂದಿದ್ದರೆ?”
“ಇಲ್ಲಮ್ಮಾ, ಅವರೇಕೆ ಶ್ರೀಶೈಲಕ್ಕೆ ಬರಬೇಕು! ಶ್ರೀಶೈಲವೇ ಅವರಿರುವೆಡೆಗೆ ನಡೆದುಬರುತ್ತದೆ. ಅಂತಹ ಅಗಾಧವಾದ ಕಾರ್ಯವನ್ನು ಕೈಕೊಂಡಿದ್ದಾನೆ ಅಣ್ಣ.
ಶ್ರೀಶೈಲದಿಂದ ಬರುವಾಗ ನಾನು ಕಲ್ಯಾಣಕ್ಕೆ ಹೋಗಿಬಂದೆ.”
“ಹೌದೇ ಗುರುಗಳೇ? ಮತ್ತೆ ಹೇಳಲೇ ಇಲ್ಲವಲ್ಲ ಗುರುಗಳೇ ಅದನ್ನು.
ಕಲ್ಯಾಣ ಹೇಗಿತ್ತು ಗುರುಗಳೇ?” ಮಹಾದೇವಿಯ ಕುತೂಹಲಕ್ಕೆ ಕೋಡುಗಳೆರಡು
ಮೂಡಿದ್ದುವು.
“ಅದನ್ನೇನು ಹೇಳಲಿ, ತಾಯಿ? ಶ್ರೀಶೈಲವನ್ನೇನೋ ವರ್ಣಿಸಿದೆ.
ಆದರೆ ಕಲ್ಯಾಣವನ್ನು ಹೇಗೆ ವರ್ಣಿಸಲಿ. ಮುಂದಿನ ಮಾನವ ಜನಾಂಗಕ್ಕೆ
ಆದರ್ಶಪ್ರಾಯವಾಗಿ ನಿಲ್ಲಬಲ್ಲ ಮಹಾಪ್ರಯೋಗವೊಂದು ಅಣ್ಣನವರ ನೇತೃತ್ವದಲ್ಲಿ
ರೂಪುಗೊಳ್ಳುತ್ತಿದೆ. ಈಗ ಅದನ್ನು ವರ್ಣಿಸಲಾರೆ. ಕ್ರಮೇಣ ಅದನ್ನು ತಿಳಿಸಿ
ಕೊಡುತ್ತೇನೆ.”
“ಅಣ್ಣನವರನ್ನು ನೀವು ನೋಡಿದಿರಾ?” ಮತ್ತೆ ಪ್ರಶ್ನೆ ಮಹಾದೇವಿಯದು.
“ಹೌದು! ಬಂದವರಿಗೆಲ್ಲಾ ಅದೇನು ಉಪಚಾರ, ಆ ಅಣ್ಣನವರದು!
ಅಂತಹ ದೊಡ್ಡ ಅಧಿಕಾರದಲ್ಲಿದ್ದರೂ ಅದೇನು ವಿನಯವಮ್ಮ. ಅದು ಹೇಳಿದರೆ
ನಂಬುವುದು ಕಷ್ಟ. ನನಗಂತೂ ಅವರ ಉಪಚಾರವನ್ನು ಕಂಡು
ಸಂಕೋಚವಾಯಿತು.” ಅದನ್ನು ಸ್ಮರಿಸಿಕೊಳ್ಳುತ್ತಾ ಹೇಳಿದರು ಗುರುಲಿಂಗರು.
“ಅವರ ಬಳಿ ಏನನ್ನಾದರೂ ಮಾತನಾಡಿದಿರಾ ಗುರುಗಳೇ?”
ಮಹಾದೇವಿಯ ಕುತೂಹಲ ಇನ್ನೂ ತೃಪ್ತಿಯಾಗಿರಲಿಲ್ಲ.